ಕಾರವಾರ :ಫೆಬ್ರವರಿ 19:ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾಹಿತಿ, ಪ್ರಕಾಶಕ, ನಾಟಕಕಾರ ಅಂಕೋಲಾದ ವಿಷ್ಣು ನಾಯ್ಕ (79) ಶನಿವಾರ ನಿಧನ ಹೊಂದಿದರು. ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಕಾರವಾರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ಅವರ ಪಾರ್ಥಿವ ಶರೀರವನ್ನು ಅಂಬಾರ ಕೊಡ್ಲದ ಅವರ ಪರಿಮಳದ ಮನೆಯಂಗಳ ದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಜನರು ಅಂತಿಮ ದರ್ಶನ ಪಡೆದರು.ಚುಟುಕು ಬ್ರಹ್ಮ ದಿನಕರ ದೇಸಾಯಿ ಗರಡಿಯಲ್ಲಿ ಪಳಗಿದ ವಿಷ್ಣು ನಾಯ್ಕ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು.
ಸಾಹಿತ್ಯ ಕೃಷಿಗೆ ಸೀಮಿತವಾಗಿರದೇ ಸ್ವತಃ ನಾಟಕಗಳನ್ನು ಬರೆದು ಅಭಿನಯಿಸಿದ್ದರು. ತಮ್ಮದೇ ಆದ ರಾಘವೇಂದ್ರ ಪ್ರಕಾಶನ ಆರಂಭಿಸಿ ಕನ್ನಡ ಪುಸ್ತಕಗಳನ್ನು ಮುದ್ರಿಸಿದರು. ಪತ್ರಕರ್ತ, ಅಂಕಣಕಾರ, ತಾಳಮದ್ದಳೆ ಅರ್ಥಧಾರಿ, ಸಂಘಟಕರಾಗಿ ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ
ಸರಾಯಿ ಸೂರಪ್ಪ, ಬೋಳುಗುಡ್ಡ, ಬಿನ್ನಹಕೆ ಬಾಯಿಲ್ಲ, ಒಂದು ಹನಿ ರಕ್ತ, ಅಯ್ಯೋರ ಪೂಜೆ, ಸಾವಿನ ಹಾದಿ, ಯುದ್ಧ, ಪ್ರೀತಿ ಜಗತ್ತಿನ ದೊರೆ ಅವರ ಪ್ರಮುಖ ನಾಟಕಗಳು. ಹಲವು ಕವನ ಸಂಗ್ರಹ, ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಸೇರಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ತಮ್ಮ ಬರವಣಿಗೆಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ವಿಷ್ಣುನಾಯ್ಕ ಹೊಂದಿದ್ದರು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಂಬಾರ ಕೊಡ್ಡದವರಾದ ಇವರು ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ.