ಬೆಂಗಳೂರು :ಫೆಬ್ರವರಿ 15: ನವಜಾತ ಶಿಶುಗಳಿಗೆ ತುರ್ತು ಆರೋಗ್ಯ ಸೇವೆ ಮತ್ತು ಶಿಶುಗಳ ಮರಣ ಪ್ರಮಾಣವನ್ನು ಏಕ ಅಂಕಿಗೆ ಇಳಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಆರೋಗ್ಯ ಇಲಾಖೆ ನವಜಾತ ಶಿಶುಗಳ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ನೂತನ 4 ನವಜಾತ ಆಂಬ್ಯುಲೆನ್ಸ್ ಸೇವೆಗಳಿಗೆ ಚಾಲನೆ ನೀಡಿದರು.
ಅವಧಿಪೂರ್ವವಾಗಿ ಜನಿಸಿದ ಮಗು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಈ ಅಂಬ್ಯುಲೆನ್ಸ್ ಗಳು ಸಹಕಾರಿಯಾಗಲಿವೆ. ಸುಧಾರಿತ ಜೀವ ರಕ್ಷಕ ಸೌಲಭ್ಯಗಳನ್ನು ಒಳಗೊಂಡ ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಕರೆದೊಯ್ಯಬಹುದಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ದೂರದ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆ ಇರುವ ಮತ್ತು ವಿಶೇಷ ಆರೈಕೆಯ ಅಗತ್ಯವಿರುವ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ಅಂಬ್ಯುಲೆನ್ಸ್ ಗಳ ಸೇವೆ ಮುಖ್ಯ.
ನೂತನ ನವಜಾತ ಶಿಶು ಆಂಬ್ಯುಲೆನ್ಸ್‌ಗಳು ಸೇವೆಗೆ ಲಭ್ಯವಾಗುವುದರ ಮೂಲಕ ಆರೈಕೆಯಲ್ಲಿನ ಅಂತರವು ಕಡಿಮೆಯಾಗಲಿದೆ. ವೆಂಟಿಲೇಟರ್, ಮೇಲ್ವಿಚಾರಣೆ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ಜೀವ ರಕ್ಷಕ ಸಾಧನಗಳನ್ನು ಈ ಆಂಬ್ಯುಲೆನ್ಸ್ ಗಳು ಒಳಗೊಂಡಿವೆ.
ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ನವಜಾತ ಶಿಶುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಆರೈಕೆ ಮಾಡಲು ಪರಿಣತಿ ಹೊಂದಿರುವ ನರ್ಸ್‌ಗಳು ಲಭ್ಯವಿರುತ್ತಾರೆ. ರಾಜ್ಯದ ನಾಲ್ಕು ವಿಭಾಗಗಳ ಪ್ರಮುಖ ಆಸ್ಪತ್ರೆಗಳಿಗೆ ನವಜಾತಾ ಅಂಬ್ಯುಲೆನ್ಸ್ ಅನ್ನ ವಿತರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ನವಜಾತಾ ಅಂಬ್ಯುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ, ಮೈಸೂರಿನ ಚಲುವಾಂಬ ಆಸ್ಪತ್ರೆ, ರಾಯಚೂರಿನ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ನಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ನವಜಾತಾ ಅಂಬ್ಯುಲೆನ್ಸ್ ಗಳನ್ನ ನಿಗದಿಪಡಿಸಲಾಗಿದೆ.
ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಗಂಭೀರ ಅನಾರೋಗ್ಯ ಸಮಸ್ಯೆ ಇರುವ ನವಜಾತ ಶಿಶುಗಳು ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಲಿದೆ. ವಿಶೇಷ ಆರೈಕೆ, ಸಮಯೋಚಿತ ಚಿಕಿತ್ಸೆ ನೀಡುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಬಹುದ್ದು, ನವಜಾತ ಶಿಶುಗಳ ಆರೋಗ್ಯವನ್ನು ಸುಧಾರಿಸಬಹುದು. ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯವ ಸಮಯದಲ್ಲಿ ತಮ್ಮ ಮಗು ತಜ್ಞರ ಆರೈಕೆಯನ್ನು ಪಡೆಯುತ್ತಿರುವುದರಿಂದ ಪೋಷಕರ ಭಯ, ಒತ್ತಡ ಕಡಿಮೆಯಾಗಲಿದೆ.