ಬೆಂಗಳೂರು :ಫೆಬ್ರವರಿ 13:ರಾಜ್ಯದ ಆಶಾ ಕಾರ್ಯಕರ್ತೆಯರ ಗೌರವಧನವನ್ನು 7,000ಕ್ಕೆ ಹೆಚ್ಚಳ ಮಾಡಲಾಗುತ್ತದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರನ್ನು ಭೇಟಿಯಾದಂತ ಅವರು ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ರಾಜ್ಯ ಸರ್ಕಾರ ನೀಡುವ 5,000 ಜೊತೆಗೆ, 2,000 ಸೇರಿಸಿ ಒಟ್ಟು 7,000 ನೀಡಲಾಗುವುದು ಎಂದು ತಿಳಿಸಿದರು.
ಇನ್ನೂ ಆಶಾ ಕಾರ್ಯಕರ್ತೆಯರು ನಡೆಸುವ ಆರೋಗ್ಯ ಸೇವೆ ಚಟುವಟಿಕೆಗಳನ್ನು ಪರಿಗಣಿಸಿ, ಪ್ರೋತ್ಸಾಹಧನವನ್ನು ಪಾರದರ್ಶಕವಾಗಿ ನೀಡಲಾಗುವುದು ಎಂಬುದಾಗಿ ಹೇಳಿದರು.
ಒಂದು ವೇಳೆ ಯಾರಿಗೆ ತಮ್ಮ ಚಟುವಟಿಕೆಗಳ ಪ್ರಕಾರ ಪ್ರೋತ್ಸಾಹಧನ ದೊರೆಯುವುದಿಲ್ಲ ಅದನ್ನ 6 ತಿಂಗಳ ಕಾಲಮಿತಿಯೊಳಗೆ ಪರಿಹರಿಸಬೇಕು. ಕಾಲಮಿತಿಯೊಳಗೆ ಪರಿಹಾರವಾಗದಿದ್ದರೆ ಕಾರ್ಯಕರ್ತೆಯರಿಗೆ ನೇರವಾಗಿ ಸಿಗಬೇಕಾದ ಪ್ರೋತ್ಸಶಹಧನ ವರ್ಗಾವಣೆಯಾಗುವಂತೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಅಲ್ಲದೇ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಚಟುವಟಿಕೆಗಳಿಗೆ ನೀಡುವ ಟೀಮ್ ಬೇಸ್ಟ್ ಇನ್ಸೆಂಟಿವ್ ನ್ನು ಆಶಾ ನಿಧಿ ತಂತ್ರಾಂಶದ ಮುಖೇನವೇ ನೇರವಾಗಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುವುದು. ಆಶಾ ಕಾರ್ಯಕರ್ತೆಯರು ತಾವು ನಿರ್ವಹಿಸಿದ ಚಟುವಟಿಕೆಗಳನ್ನು ದಾಖಲಿಸಲು ಪ್ರತ್ಯೇಕವಾದ ಮೊಬೈಲ್ ಅಪ್ಲಿಕೇಷನ್ ನ್ನು ವಿನ್ಯಾಸ ಮಾಡಲಾಗುವುದು ಎಂದರು.
ಆಶಾ ಕಾರ್ಯಕರ್ತೆಯರೇ ತಾವು ನಿರ್ವಹಿಸಿದ ಕಾರ್ಯಚಟುವಟಿಕೆಗಳು, ಹಾಗೂ ಸಿಗಬೇಕಾದ ಪ್ರೋತ್ಸಾಹಧನವನ್ನ ಆಯಪ್ ನಲ್ಲಿ ನೋಡಿಕೊಳ್ಳಲು ಅವಕಾಶ ಕಲ್ಪಿಸುವಂತಹ ಪಾರದರ್ಶಕ ಕ್ರಮಗಳನ್ನ ಕೈಗೊಳ್ಳುತ್ತಿರುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.