ಪುಣೆ:ಫೆಬ್ರವರಿ 10:ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪತ್ರಕರ್ತ ನಿಖಿಲ್ ವಾಗ್ಲೆ ಕಾರನ ಮೇಲೆ ಬಿಜೆಪಿ ಕಾರ್ಯಕರ್ತರು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ.ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಪತ್ರಕರ್ತ ನಿಖಿಲ್ ವಾಗ್ಲೆ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರನ್ನು ಸುತ್ತುವರೆದ ಬಿಜೆಪಿ ಕಾರ್ಯಕರ್ತರ ಗುಂಪು ಕಾರಿನ ವಿಂಡ್‌ಸ್ಕ್ರೀನ್ ಮತ್ತು ಗಾಜುಗಳನ್ನು ಹಾನಿಗೊಳಿಸಿದ್ದು, ಅದರ ಮೇಲೆ ಶಾಯಿಯನ್ನು ಎಸೆದಿರುವುದನ್ನು ವೀಡಿಯೋದಲ್ಲಿ ಸೆರೆಯಾಗಿದೆ.
ಆಡಳಿತ ಪಕ್ಷದ ಹಿರಿಯ ಮುಖಂಡರಿಗೆ ಭಾರತ ರತ್ನ ಘೋಷಣೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ ಕೆ ಅಡ್ವಾಣಿ ಬಗ್ಗೆ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ವಾಗ್ಲೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮಹಾ ವಿಕಾಸ್ ಆಘಾದಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ನಂತರ ಈ ಘಟನೆ ನಡೆದಿದೆ.ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ವಾಗ್ಲೆ, ತನ್ನ ಮೇಲೆ ದಾಳಿ ನಡೆಸಿದವರನ್ನು ಕ್ಷಮಿಸುವುದಾಗಿ ಹೇಳಿದರು. ಈ ಹಿಂದೆ ನನ್ನ ಮೇಲೆ ಆರು ಬಾರಿ ದಾಳಿಯಾಗಿತ್ತು. ಇದು ಏಳನೇ ದಾಳಿ ಎಂದು ಹೇಳಿದರು.