ಮಣಿಪಾಲ, 09 ಫೆಬ್ರವರಿ 2024: ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ (ಐಎಸ್ ಸಿ ಸಿ ಎಂ) ವಿವಿಧ ಐಎಸ್ ಸಿ ಸಿ ಎಂ ಶಾಖೆಗಳು ನಡೆಸುವ ಕಾರ್ಯಕ್ರಮಗಳ ಮೂಲಕ ಸೆಪ್ಸಿಸ್ ಮತ್ತು ಅದರ ಮಾರಣಾಂತಿಕ ತೊಡಕುಗಳ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ಉಪಕ್ರಮವನ್ನು ತೆಗೆದುಕೊಂಡಿದೆ. ಸೆಪ್ಸಿಸ್ ಒಂದು ಮಾರಣಾಂತಿಕ ಸೋಂಕಾಗಿದ್ದು, ಭಾರತದಲ್ಲಿ ಪ್ರತಿ ವರ್ಷ ಸುಮಾರು 1.2 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭಾರತದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಜನರು ಸಾವನ್ನಪ್ಪುತ್ತಾರೆ. ಸೆಪ್ಸಿಸ್ ನಿಂದ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಹೋಲಿಸಿದರೆ, 2023 ರಲ್ಲಿ ಭಾರತದಲ್ಲಿ ಸುಮಾರು 32,000 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗವು ಮಣಿಪಾಲದಲ್ಲಿ ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ (ISCCM) ಮಣಿಪಾಲ ಶಾಖೆಯ ವತಿಯಿಂದ ಜಾಗೃತಿ ಶಿಕ್ಷಣ ಅಭಿಯಾನವನ್ನು ಶಾಖೆಯ ಸದಸ್ಯರು, ಸಾರ್ವಜನಿಕರು, ವೈದ್ಯರು, ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಶೈಕ್ಷಣಿಕ ಉಪಕ್ರಮದ ಭಾಗವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಅಧ್ಯಾಪಕರು ಮಾಹಿತಿ ನೀಡಿ , ಮೂತ್ರ ಅಥವಾ ಚರ್ಮ ಅಥವಾ ಶ್ವಾಸಕೋಶದ ಸೋಂಕಿನ ಜ್ವರ ಸೇರಿದಂತೆ ಯಾವುದೇ ಸೋಂಕನ್ನು ಜನರು ಎಂದಿಗೂ ನಿರ್ಲಕ್ಷಿಸಬಾರದು ಮತ್ತು ಆದಷ್ಟು ಬೇಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂದು ಒತ್ತಿ ಹೇಳಿದರು. ಸೋಂಕು ಹರಡುವುದನ್ನು ತಡೆಯಲು ನಿಯಮಿತವಾಗಿ ಕೈ ತೊಳೆಯುವಂತಹ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಇದು ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಐಎಸ್‌ಸಿಸಿಎಂ ಮಣಿಪಾಲ ಶಾಖೆಯ ಅಧ್ಯಕ್ಷ ಡಾ. ಸೌವಿಕ್ ಚೌಧುರಿ, ಕಾರ್ಯದರ್ಶಿ ಡಾ. ಸುನಿಲ್ ಆರ್ ಮತ್ತು ಖಜಾಂಚಿ ಡಾ. ಮಾರ್ಗಿ ಭಟ್ ಮತ್ತು ಐಎಸ್‌ಸಿಸಿಎಂ ಮಣಿಪಾಲ ಶಾಖೆಯ ಇತರ ಪ್ರಮುಖ ಸದಸ್ಯರು ಸೆಪ್ಸಿಸ್ ಲಕ್ಷಣಗಳನ್ನು ಸಾಮಾನ್ಯರಿಗೆ ಶೀಘ್ರವಾಗಿ ಗುರುತಿಸುವ ಮಹತ್ವವನ್ನು ವಿವರಿಸಿದರು. ಸಾರ್ವಜನಿಕರು, ವೈದ್ಯರು ಇತರ ವೈದ್ಯಕೀಯ ವೃತ್ತಿಪರರು ಸೇರಿದಂತೆ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಈ ಮಹತ್ವದ ಉಪಕ್ರಮವನ್ನು ಪ್ರತಿ ವರ್ಷ ವಿವಿಧ ಚಟುವಟಿಕೆಗಳ ಮೂಲಕ ಮುಂದುವರಿಸುವ ಗುರಿಯನ್ನು ಹೊಂದಲಾಗಿದೆ.