ಚಿಕ್ಕಮಗಳೂರು:ಫೆಬ್ರವರಿ 07:ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟು ಹೋದ ಕಾರಣ ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘನೆ ಚಿಕ್ಕಮಗಳೂರಿನ ತೇಗೂರು ಗ್ರಾಮದಲ್ಲಿ ನಡೆದಿದೆ.
ವಿನೋದ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ತೇಗೂರು ಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದ ವಿನೋದ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ತೇಗೂರು ಗ್ರಾಮದ ತನುಜಾ ಎಂಬ ಯುವತಿ ಹಾಗೂ ವಿನೋದ್ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಗೆ ಯುವತಿ ಮನೆಯವರ ಸಮ್ಮತಿ ಇರಲಿಲ್ಲ. ಹೀಗಾಗಿ ಯುವತಿ ಮನೆಯವರ ವಿರೋಧದ ನಡುವೆಯೇ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದರು. ಡಿಸೆಂಬರ್ 10 ರಂದು ವಿನೋದ್ ಹಾಗೂ ತನುಜಾ ಮದುವೆಯಾಗಿದ್ದರು.
ಇನ್ನೇನು ಪರಸ್ಪರ ಪ್ರೀತಿ ಮಾಡಿದ್ದ ಜೋಡಿ ಹಕ್ಕಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರು ಮಾಡುವ ಹೊತ್ತಲ್ಲೇ ಪೊಲೀಸರು ನವ ಜೋಡಿಯನ್ನು ಠಾಣೆಗೆ ಕರೆ ತಂದಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಠಾಣೆಯಲ್ಲಿ ಪಂಚಾಯಿತಿ ನಡೆದಿದ್ದು ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಳು.
ಮದುವೆಯಾದ ಮೂರೇ ದಿನ ಗಂಡನನ್ನು ಬಿಟ್ಟು ತಾಯಿ ಜೊತೆ ಹೋಗುವುದಾಗಿ ಹೇಳಿ ಯುವತಿ ಉಲ್ಟಾ ಹೊಡೆದಿದ್ದಾಳೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ