ಬೆಂಗಳೂರು :ಫೆಬ್ರವರಿ 06: ಕೇಂದ್ರ ಸರ್ಕಾರ ನೀಡುವ ರೂ.29 ಕೇಜಿಯ ಭಾರತ್ ಅಕ್ಕಿ ಮಾರಾಟಕ್ಕೆ ಮಂಗಳವಾರದಿಂದ ರಾಜ್ಯದಲ್ಲಿಯೂ ಚಾಲನೆ ಸಿಗಲಿದ್ದು, ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ (ನಾಫೆಡ್) ಏಳು ಸಂಚಾರಿ ವಾಹನಗಳಲ್ಲಿ ಮಾರಾಟ ಪ್ರಾರಂಭವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ನಾಫೆಡ್ ರಾಜ್ಯ ಮುಖ್ಯಸ್ಥೆ ಜ್ಯೋತಿ ಪಾಟೀಲ್, ಮಂಗಳವಾರ ಸಂಜೆ 4ಕ್ಕೆ ಭಾರತ್ ಅಕ್ಕಿ ವಾಹನಗಳಿಗೆ ಚಾಲನೆ ನೀಡಲಾಗುವುದು.ಪ್ರಾಥಮಿಕವಾಗಿ ಮಂಗಳವಾರ ಬೆಂಗಳೂರಿನಲ್ಲಿ ಮಾತ್ರ ಸಿಗಲಿದ್ದು, ನಗರದ ವಿವಿಧೆಡೆ ಈ ವಾಹನಗಳು ಸಂಚರಿಸಿ ಅಕ್ಕಿ ಮಾರಲಿವೆ. ಬುಧವಾರದಿಂದ ಮಂಡ್ಯದಲ್ಲಿ ಹಾಗೂ ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದರು.
ಬಿಗ್ ಬಾಸ್ಕೆಟ್, ಪ್ಲಿಪ್‌ಕಾರ್ಟ್, ರಿಲೈಯನ್ಸ್ ಸ್ಟೋರ್ಸ್, ಸ್ಟಾರ್ ಹೈಪರ್ ಬಝಾರ್‌ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಂಗಳವಾರ ಸಂಜೆಯಿಂದ ರಿಲೈಯನ್ಸ್ ಸ್ಟೋರ್ಸ್‌ಗಳಲ್ಲಿ ಈ ಅಕ್ಕಿ ಸಿಗಲಿದೆ. ಇನ್ನೊಂದು ವಾರದ ಬಳಿಕ ಇತರೆ ಸ್ಟೋರ್ಸ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು.
ಭಾರತ್ ಅಕ್ಕಿ ಜೊತೆಗೆ, ಈಗಾಗಲೇ ವಾಹನಗಳಲ್ಲಿ ಕೇಜಿಗೆ ರೂ.27.50 ನಂತೆ ಮಾರುತ್ತಿರುವ ಗೋಧಿ ಹಿಟ್ಟು, ಕೇಜಿಗೆ ರೂ 60 ನಂತೆ ಕಡ್ಲೆ ಬೇಳೆ ಕೂಡ ಸ್ಟೋರ್ಸ್‌ಗಳಲ್ಲಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.