ಫೆಬ್ರವರಿ 05 :ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ಕಾಡ್ಗಿಚ್ಚಿಗೆ 99 ಜನ ಬಲಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಾವಿರಾರು ಮನೆಗಳು ಕಾರ್, ಬೈಕ್ ಗಳು ಸುಟ್ಟು ಭಸ್ಮವಾಗಿವೆ.
ಭೀಕರ ಕಾಡ್ಗಿಚ್ಚಿನಿಂದಾಗಿ ವಾಲ್ಪಾರೈಸೊ ಪ್ರದೇಶದಲ್ಲಿ ಕನಿಷ್ಠ 99 ಸಾವುಗಳು ಈಗಾಗಲೇ ದಾಖಲಾಗಿವೆ.
ನೂರಾರು ಜನರು ಕಾಣೆಯಾಗಿದ್ದಾರೆ.
ಸ್ಯಾಂಟಿಯಾಗೊದ ವಾಯುವ್ಯಕ್ಕೆ ಸುಮಾರು 120 ಕಿಮೀ ದೂರದಲ್ಲಿರುವ, ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ವಿನಾ ಡೆಲ್ ಮಾರ್ ನಗರದಲ್ಲಿ ಸುಟ್ಟ ಕಲ್ಲುಮಣ್ಣುಗಳಿಂದ ತುಂಬಿದ ಬೀದಿಗಳ ನಡುವೆ ಆಶ್ರಯ ಇಲ್ಲದ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾಲ್ಪಾರೈಸೊದ ನಾಲ್ಕು ಪುರಸಭೆಗಳ ವ್ಯಾಪ್ತಿಯಲ್ಲಿ ರಕ್ಷಣೆ, ಅಗತ್ಯ ನೆರವು, ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಆಂತರಿಕ ಸಚಿವ ಕೆರೊಲಿನಾ ತೋಹಾ ತಿಳಿಸಿದ್ದಾರೆ.
ಸಾವಿನ ಸಂಖ್ಯೆ 64 ಆಗಿತ್ತು. ಆದರೆ ಈ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ. ಸ್ಯಾಂಟಿಯಾಗೊದಿಂದ 90 ಕಿಮೀ ದೂರದಲ್ಲಿರುವ ಧ್ವಂಸಗೊಂಡ ಕ್ವಿಲ್ಪುಯಲ್ಲಿ ಅವರು ಮಾತನಾಡಿದರು.
ಶುಕ್ರವಾರದ ಬೆಂಕಿಯು ವಿನಾಶಕಾರಿ ಹಾನಿಯನ್ನುಂಟು ಮಾಡಿದೆ. ಇದು 2010 ರ ಭೂಕಂಪದ ನಂತರ ನಾವು ಅನುಭವಿಸಿದ ಅತಿದೊಡ್ಡ ದುರಂತವಾಗಿದೆ ಎಂದು ಬೋರಿಕ್ ಹೇಳಿದರು.