ಮಣಿಪಾಲ್ 02 ಫೆಬ್ರವರಿ 2024 : ಐವಿಎಫ್ ಅಥವಾ ಇನ್ ವಿಟ್ರೊ ಫರ್ಟಿಲೈಸೇಷನ್ [ಕೃತಕ ಗರ್ಭಧಾರಣೆ] ಚಿಕಿತ್ಸೆಯ ಅವಶ್ಯವಿರುವವರಿಗೆ ಸುಲಭವಾಗಿ ಮತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಿಸುವ ಪ್ರಮುಖ ಹೆಜ್ಜೆಯಾಗಿ ಐವಿಎಫ್ ಚಿಕಿತ್ಸೆಯಲ್ಲಿ ಮುಂಚೂಣಿಯ ಹೆಸರಾಗಿರುವ SAR [ಎಸ್‌ಎಆರ್] ಹೆಲ್ತ್‌ಲೈನ್ ಮತ್ತು ಮಣಿಪಾಲ್ ಆಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಸಹಭಾಗಿತ್ವವನ್ನು ಪ್ರಕಟಿಸಿವೆ. ಎರಡು ಪ್ರತಿಷ್ಠಿತ ಸಂಸ್ಥೆಗಳ ಒಡಂಬಡಿಕೆಯು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಭ್ರೂಣಶಾಸ್ತ್ರ ಚಿಕಿತ್ಸಾ ಕೇಂದ್ರದ [ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲಿನಿಕಲ್ ಎಂಬ್ರಿಯಾಲಜಿ] ತಜ್ಞತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಐವಿಎಫ್‌ನಂಥ ಚಿಕಿತ್ಸೆಯನ್ನು ಮಿತಬೆಲೆಯಲ್ಲಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಎರಡೂ ಸಂಸ್ಥೆಗಳು ಸಂಯುಕ್ತವಾಗಿ ಪ್ರಯತ್ನಿಸಲಿದ್ದು ಈ ಒಪ್ಪಂದವು ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸಂಶೋಧನೆಯನ್ನು ಉತ್ತೇಜಿಸುವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಆಶಯವನ್ನು ಹೊಂದಿದೆ.
ಎರಡೂ ಪ್ರಮುಖ ಸಂಸ್ಥೆಗಳು ಸಹಭಾಗಿತ್ವವನ್ನು ಹೊಂದಿದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ ಮಾಹೆಯ ಆರೋಗ್ಯವಿಜ್ಞಾನ ವಿಭಾಗದ ಸಹಉಪಕುಲಪತಿಗಳಾದ ಡಾ. ಶರತ್ ರಾವ್ ಅವರು, ‘ನಮ್ಮ ಉದ್ದೇಶವು ಐವಿಎಫ್ ಚಿಕಿತ್ಸೆಯನ್ನು ಸರಳದರದಲ್ಲಿ ಮತ್ತು ಅತ್ಯುತ್ತಮ ಗುಣಮಟ್ಟದಲ್ಲಿ ನೀಡುವುದಾಗಿದೆ. ಅಂಥ ವ್ಯವಸ್ಥೆಯು ಜನರಿಗೆ ಪರಿಣಾಮಕಾರಿಯಾಗಿ ತಲುಪಲು ಸ್ಥಳೀಯ ಆರೋಗ್ಯವಿಜ್ಞಾನ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ. ಈ ಒಡಂಬಡಿಕೆಯು ಅಂಥದೇ ಮಹತ್ತ್ವದ ಪ್ರಯತ್ನವಾಗಿದೆ’ ಎಂದರು.
ಭ್ರೂಣಶಾಸ್ತ್ರ ಚಿಕಿತ್ಸಾ ಕೇಂದ್ರ [ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲಿನಿಕಲ್ ಎಂಬ್ರಿಯಾಲಜಿ] ದ ಮುಖ್ಯಸ್ಥರಾದ ಡಾ. ಸತೀಶ್ ಅಡಿಗ ಅವರು ಈ ಮಹತ್ವಪೂರ್ಣ ಹೆಜ್ಜೆಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುತ್ತ, ‘ಇದು ನಮ್ಮ ಸಂಸ್ಥೆಯ ನಿರಂತರ ಸಂಶೋಧನೆ ಮತ್ತು ಕಾರ್ಯಬದ್ಧತೆಗೆ ದೊರೆತ ಮನ್ನಣೆಯಾಗಿದೆ. SAR ಹೆಲ್ತ್‌ಲೈನ್‌ನಂಥ ಪ್ರತಿಷ್ಠಿತ ಸಂಸ್ಥೆಯು ಮಾಹೆಯ ಭ್ರೂಣಶಾಸ್ತ್ರ ಚಿಕಿತ್ಸಾ ಕೇಂದ್ರದೊಂದಿಗೆ ಜನಪರ ಕಾಳಜಿಯ ಒಡಂಬಡಿಕೆಗೆ ಮುಂದೆ ಬಂದಿರುವುದು ಅಭಿಮಾನದ ಸಂಗತಿಯಾಗಿದೆ. ಐವಿಎಫ್‌ನಂಥ ಚಿಕಿತ್ಸಾ ಸೌಲಭ್ಯವು ಆವಶ್ಯಕವಿರುವವರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಎರಡೂ ಸಂಸ್ಥೆಗಳು ಜಂಟಿಯಾಗಿ ಪ್ರಯತ್ನಿಸಲಿವೆ’ ಎಂದರು.
SAR ಹೆಲ್ತ್‌ಲೈನ್‌ನ ಸನ್ನಿ ಎಫ್ರಾಮ್ ಅವರು ಈ ಸಹಭಾಗಿತ್ವದ ಕುರಿತು ಧನಾತ್ಮಕವಾಗಿ ಸ್ಪಂದಿಸುತ್ತ, ‘ನಾವು ಮಣಿಪಾಲ ಆರೋಗ್ಯವಿಜ್ಞಾನ ಸಂಸ್ಥೆಯ ಕಾರ್ಯವೈಖರಿಯಿಂದ ಪ್ರಭಾವಿತರಾಗಿದ್ದೇವೆ. ಈ ಸಹಭಾಗಿತ್ವವು ಮುಂದಿನ ವರ್ಷಗಳಲ್ಲಿ ಎರಡೂ ಸಂಸ್ಥೆಗಳ ಪ್ರಗತಿಗೂ ಕಾರಣವಾಗಲಿದೆ’ ಎಂದರು.
ಕೆಎಂಸಿಯ ಡೀನ್ ಡಾ. ಪದ್ಮರಾಜ ಹೆಗ್ಡೆ, ಸಂತಾನೋತ್ಪತ್ತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಗುರುಪ್ರಸಾದ್ ಕಳ್ತೂರ್, SAR ಹೆಲ್ತ್‌ಲೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಶ್ರೀಧರನ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.