ನವದೆಹಲಿ : ಫೆಬ್ರವರಿ 02 :ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಆರ್ಬಿಐ ನಿರ್ಬಂಧಿಸಿರುವ ಕ್ರಮದಿಂದ ಪೇಟಿಎಂ ಸೇವೆ ನಿಲ್ಲುವುದಿಲ್ಲ ಎಂದು ಸಿಇಒ ಹೇಳಿದ್ದಾರೆ. ಈ ಬೆಳವಣಿಗೆ ಪೇಟಿಎಂಗೆ ಸ್ಪೀಡ್ ಬಂಪ್ ಇದ್ದ ಹಾಗೆ. ಫೆ. 29 ಬಳಿಕವೂ ಪೇಟಿಎಂ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ ವಿಜಯ್ ಶೇಖರ್ ಶರ್ಮಾ. ಪೇಮೆಂಟ್ಸ್ ಬ್ಯಾಂಕ್ ಬಿಟ್ಟು ಈಗ ಬೇರೆ ಬ್ಯಾಂಕುಗಳೊಂದಿಗೆ ವ್ಯವಹರಿಸಬೇಕೆಂಬ ಸ್ಪಷ್ಟತೆ ಸಿಕ್ಕಿದೆ. ಅದರಂತೆ ಕೆಲಸ ಮಾಡುತ್ತೇವೆ ಎನ್ನುತ್ತಾರೆ.
ಫೆಬ್ರುವರಿ 29ರ ನಂತರವೂ ಪೇಟಿಎಂ ಚಾಲೂನಲ್ಲಿ ಇರುತ್ತದೆ ಎಂದು ಹೇಳಿರುವ ವಿಜಯ್ ಶೇಖರ್ ಶರ್ಮಾ, ನಿರಂತವಾಗಿ ಬೆಂಬಲಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ.
ನಿಮ್ಮ ಫೇವರಿಟ್ ಆ್ಯಪ್ ಕಾರ್ಯವಹಿಸುತ್ತಿದೆ. ಫೆಬ್ರುವರಿ 29ರ ಬಳಿಕವೂ ಮಾಮೂಲಿಯಂತೆಯೇ ಕೆಲಸ ಮಾಡುತ್ತಿರುತ್ತದೆ. ನಿಮ್ಮ ನಿರಂತರ ಬೆಂಬಲಕ್ಕಾಗಿ ಪೇಟಿಎಂ ತಂಡದ ವತಿಯಿಂದ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಂದು ಸವಾಲಿನಲ್ಲೂ ಪರಿಹಾರ ಎಂಬುದು ಇರುತ್ತದೆ. ಪೂರ್ಣ ನಿಯಮಾನುಸಾರ ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ.
ಪೇಟಿಎಂಕರೋ ಚಾಂಪಿಯನ್ ಆಗಿರುವ ಪೇಮೆಂಟ್ ಕ್ರಿಯಾಶೀಲತೆಯಲ್ಲಿ ಮತ್ತು ಹಣಕಾಸು ಸೇವೆಗಳ ಒಳಗೊಳ್ಳುವಿಕೆಯಲ್ಲಿ ಭಾರತಕ್ಕೆ ಜಾಗತಿಕ ಪ್ರಶಂಸೆ ಮುಂದುವರಿಯುತ್ತದೆ’ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
ಈ ದೇಶದ ವಿವಿಧ ಬ್ಯಾಂಕುಗಳು ನಮಗೆ ನೀಡಿರುವ ಬೆಂಬಲಕ್ಕೆ ಕೃತಜ್ಞರಾಗಿದ್ದೇವೆ. ಹೆಚ್ಚೆಚ್ಚು ಪ್ರಾದೇಶಿಕ ಮತ್ತು ದೊಡ್ಡ ಬ್ಯಾಂಕುಗಳು ಉನ್ನತ ಮಟ್ಟದಲ್ಲಿ ನಮ್ಮನ್ನು ಸಂಪರ್ಕಿಸಿ ಸಹಾಯ ಮಾಡಲು ಇಚ್ಛಿಸುತ್ತಿವೆ,’ ಎಂದು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ತಿಳಿಸಿದ್ದಾರೆ.
‘ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ವಿವಿಧ ಬ್ಯಾಂಕುಗಳೊಂದಿಗೆ ಸಹಭಾಗಿತ್ವದಲ್ಲಿ ತೊಡಗಿತ್ತು. ಅದರಲ್ಲಿ ಪೇಟಿಎಂ ಪೇಮೆಮಟ್ಸ್ ಬ್ಯಾಂಕ್ ಒಂದು ಮುಖ್ಯ ಭಾಗವಾಗಿತ್ತು. ಈಗಿನಿಂದ ಪೇಟಿಎಂ ಬ್ಯಾಂಕ್ ಬಿಟ್ಟು ಬೇರೆ ಬ್ಯಾಂಕುಗಳೊಂದಿಗೆ ಕೆಲಸ ಮಾಡಬೇಕೆಂಬ ಸ್ಪಷ್ಟತೆ ಸಿಕ್ಕಿದೆ. ಒನ್97 ಕಮ್ಯೂನಿಕೇಶನ್ಸ್ ಮತ್ತು ಪಿಪಿಎಸ್ಎಲ್ ಎರಡೂ ಕೂಡ ತಮ್ಮ ನೋಡಲ್ ಅಕೌಂಟ್ಗಳನ್ನು ಬೇರೆ ಬ್ಯಾಂಕುಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಶುರು ಮಾಡಿವೆ,’ ಎಂದೂ ಶರ್ಮಾ ಸ್ಪಷ್ಟಪಡಿಸಿದ್ದಾರೆ.