ನವದೆಹಲಿ:ಫೆಬ್ರವರಿ 01:ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗಕ್ಕೆ ನಾಲ್ವರು ಸದಸ್ಯರನ್ನು ನೇಮಕ ಮಾಡಿದೆ. ನೀತಿ ಆಯೋಗ್ನ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಈ ಆಯೋಗದ ಛೇರ್ಮನ್ ಆಗಿದ್ದಾರೆ. ಸೌಮ್ಯಾ ಕಾಂತಿ ಘೋಷ್, ಅಜಯ್ ನಾರಾಯಣ್ ಝಾ, ಆನೀ ಜಾರ್ಜ್ ಮ್ಯಾಥ್ಯೂ ಮತ್ತು ನಿರಂಜನ್ ರಾಜಾಧ್ಯಕ್ಷ ಅವರು ನೇಮಕಗೊಂಡ ನಾಲ್ವರು ಸದಸ್ಯರು.
16ನೇ ಹಣಕಾಸು ಆಯೋಗದ ನೇತೃತ್ವ ಹೊಂದಿರುವ ಅರವಿಂದ್ ಪನಗರಿಯಾ ಅವರ ತಂಡಕ್ಕೆ ಒಬ್ಬರು ಕಾರ್ಯದರ್ಶಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಹಾಗೂ ಒಬ್ಬರು ಆರ್ಥಿಕ ಸಲಹೆಗಾರರು ಸಹಾಯವಾಗಿ ಇರಲಿದ್ದಾರೆ.
ಎಸ್ಬಿಐ ಗ್ರೂಪ್ನ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯಾ ಕಾಂತಿ ಘೋಷ್, ಮಾಜಿ ವೆಚ್ಚ ಕಾರ್ಯದರ್ಶಿ ಅಜಯ್ ನಾರಾಯಣ್ ಝಾ, ನಿವೃತ್ತ ಐಎಎಸ್ ಅಧಿಕಾರಿ ಆನೀ ಜಾರ್ಜ್ ಮ್ಯಾಥ್ಯೂ ಮತ್ತು ಅರ್ಥ ಗ್ಲೋಬಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಿರಂಜನ್ ರಾಜಾಧ್ಯಕ್ಷ ಅವರು 16ನೇ ಹಣಕಾಸು ಆಯೋಗದ ಸದಸ್ಯರಾಗಿರುತ್ತಾರೆ
ಈ ಪೈಕಿ ಸೌಮ್ಯಾ ಕಾಂತಿ ಘೋಷ್ ಅರೆಕಾಲಿಕ ಸದಸ್ಯರಾಗಿರುತ್ತಾರೆ. ಈ ಮೇಲಿನ ನಾಲ್ವರು ಸದಸ್ಯರಿರುವ ಹಣಕಾಸು ಆಯೋಗಕ್ಕೆ ಋತ್ವಿಕ್ ರಂಜನಮ್ ಪಾಂಡೆ ಸೇರಿದಂತೆ ಇತರ ಕೆಲವರು ಸಹಾಯವಾಗಿರುತ್ತಾರೆ
ಛೇರ್ಮನ್ ಹಾಗೂ ಇತರ ಸದಸ್ಯರು ತಮ್ಮ ವರದಿ ಸಲ್ಲಿಸುವವರೆಗೆ ಅಥವಾ 2025ರ ಅಕ್ಟೋಬರ್ 31ರವರೆಗೆ ಅಧಿಕಾರ ಹೊಂದಿರುತ್ತಾರೆ’ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
16ನೇ ಹಣಕಾಸು ಆಯೋಗದ ಸದಸ್ಯರಿವರು
ಛೇರ್ಮನ್: ಅರವಿಂದ್ ಪನಗರಿಯಾ
ಸದಸ್ಯರು: ಸೌಮ್ಯಾ ಕಾಂತಿ ಘೋಷ್, ಅಜಯ್ ನಾರಾಯಣ್ ಝಾ, ಆನೀ ಜಾರ್ಜ್ ಮ್ಯಾಥ್ಯೂ ಮತ್ತು ನಿರಂಜನ್ ರಾಜಾಧ್ಯಕ್ಷ.
ಹಣಕಾಸು ಆಯೋಗದ ಜವಾಬ್ದಾರಿಗಳೇನು?
ಹಣಕಾಸು ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಣಕಾಸು ಸಂಬಂಧದ ಬಗ್ಗೆ ಸಲಹೆಗಳನ್ನು ನೀಡಲೆಂದು ಸ್ಥಾಪನೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ಸೂತ್ರವನ್ನು ಇದು ಶಿಫಾರಸು ಮಾಡುತ್ತದೆ. ಐದು ವರ್ಷದ ಅವಧಿಗೆ ಇದರ ಶಿಫಾರಸುಗಳು ಚಾಲನೆಯಲ್ಲಿರುತ್ತವೆ