ನವದೆಹಲಿ:ಜನವರಿ 31:ಮೊಬೈಲ್ ಫೋನ್ ತಯಾರಿಕೆಯಲ್ಲಿ ಬಳಸುವ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಶೇ.15ರಿಂದ ಶೇ.10ಕ್ಕೆ ಇಳಿಸಲಾಗಿದೆ.ಇದರೊಂದಿಗೆ ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಿಕಾ ಉದ್ಯಮ (smartphone manufacturing industry) ಪ್ರಬಲಗೊಳ್ಳಲಿದೆ. ಉತ್ಪಾದನಾ ವೆಚ್ಚ ಕಡಿಮೆಗೊಳ್ಳುವುದರಿಂದ ಚೀನಾ, ವಿಯೆಟ್ನಾಂ ಮೊದಲಾದ ದೇಶಗಳಿಗೆ ಸ್ಪರ್ಧೆಯೊಡ್ಡಲು ಭಾರತೀಯ ತಯಾರಕರಿಗೆ ಸಾಧ್ಯವಾಗಲಿದೆ.
ಸರ್ಕಾರವು ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದರೆ ಮುಂದಿನ ಎರಡು ವರ್ಷಗಳಲ್ಲಿ ಭಾರತದಿಂದ ಮೊಬೈಲ್ ಫೋನ್ ರಫ್ತು 39 ಬಿಲಿಯನ್ ಡಾಲರ್ಗೆ ಮೂರು ಪಟ್ಟು ಹೆಚ್ಚಾಗಬಹುದು ಎಂದು ಇಂಡಿಯನ್ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಈ ಹಿಂದೆ ಹೇಳಿತ್ತು
ಭಾರತೀಯ ಮೊಬೈಲ್ ಉದ್ಯಮವು 2024 ರ ಹಣಕಾಸು ವರ್ಷದಲ್ಲಿ ಸುಮಾರು 50 ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನ್ಗಳನ್ನು ತಯಾರಿಸುವ ನಿರೀಕ್ಷೆಯಿದೆ, ಇದು ಮುಂದಿನ ಹಣಕಾಸು ವರ್ಷದಲ್ಲಿ 55-60 ಬಿಲಿಯನ್ ಡಾಲರ್ಗೆ ಏರುವ ಸಾಧ್ಯತೆಯಿದೆ. ರಫ್ತು 2024ರ ಹಣಕಾಸು ವರ್ಷದಲ್ಲಿ 15 ಶತಕೋಟಿ ಡಾಲರ್ ಗೆ ಮತ್ತು 2025ರಲ್ಲಿ 27 ಶತಕೋಟಿ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆಯಿದೆ.
ಮೊಬೈಲ್ ಬಿಡಿಭಾಗಗಳ ಆಮದಿಗೆ ವಿಧಿಸಲಾಗುವ ಸುಂಕವನ್ನು ಕಡಿಮೆಗೊಳಿಸಬೇಕೆಂಬ ಕೂಗು ಸಾಕಷ್ಟು ಕಾಲದಿಂದ ಈ ಉದ್ಯಮದವರಿಂದ ಕೇಳುತ್ತಾ ಬಂದಿತ್ತು. ಇದೀಗ ಸರ್ಕಾರ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಂಡಿದೆ.