ಬೆಂಗಳೂರು, ಜನವರಿ 30: ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ವಿಮಾನ ಹೊರಡುವುದಕ್ಕೂ ಮುನ್ನ ಕೆಲವೇ ಕ್ಷಣಗಳ ಮುನ್ನ ಹೇಳಿದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಭಾನುವಾರ ಸಂಜೆ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಆರೋಪಿಯನ್ನು ಖಾಸಗಿ ಕಂಪನಿ ಉದ್ಯೋಗಿ ಸಜು ಕೆ ಕುಮಾರನ್ ಎಂದು ಗುರುತಿಸಲಾಗಿದೆ. ಕೇರಳದ ಕೊಚ್ಚಿಗೆ ತೆರಳಲು ಏರ್ ಇಂಡಿಯಾ ವಿಮಾನದಲ್ಲಿ ಕುಳಿತಿದ್ದಾಗ ಸಜು ಕುಮಾರ್ ವಿಕೃತಿ ಮೆರೆದಿದ್ದರು. ಇದರಿಂದಾಗಿ ಭದ್ರತಾ ಸಿಬ್ಬಂದಿ ಬೇಸ್ತು ಬೀಳುವಂತಾಗಿತ್ತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿದ್ದ ಸಜು ಕುಮಾರ್ (48) ಇನ್ನೇನು ವಿಮಾನ ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದ.
ವಿಮಾನ ನಿಲ್ದಾಣ ಪೊಲೀಸರ ಪ್ರಕಾರ, ಈ ಘಟನೆಯು ಭಾನುವಾರ ಸಂಜೆ 5.25 ಕ್ಕೆ ಸಂಭವಿಸಿದೆ. ವಿಮಾನ ಸಂಖ್ಯೆ ‘I5 990’ ರ ನಿರ್ಗಮನಕ್ಕೆ ಕೇವಲ ಐದು ನಿಮಿಷಗಳ ಮೊದಲು ಆರೋಪಿಯು ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ. ಏರ್‌ಲೈನ್ ಸಿಬ್ಬಂದಿಗೆ ಬ್ಯಾಗ್ ಪರಿಶೀಲಿಸಲೂ ಅನುವು ಮಾಡಿಕೊಡಲಿಲ್ಲ. ಪರಿಣಾಮವಾಗಿ ತಕ್ಷಣವೇ ಆತನನ್ನು ವಿಮಾದಿಂದ ಇಳಿಸಲಾಯಿತು. ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದರು
ಆರೋಪಿ ವಿರುದ್ಧ ಎಫ್ಐಆರ್
ಬಳಿಕ ಆರೋಪಿಯನ್ನು ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಹೇಳಿಕೆಗಳಿಗೆ ಸಂಬಂಧಿಸಿದ್ದಾಗಿದ್ದು, ಆರೋಪ ಸಾಬೀತಾದರೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಇದು ಅಕ್ಷಮ್ಯ ಅಪರಾಧವಾಗಿದೆ ಮತ್ತು ಇದೀಗ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯದಿಂದ ಅನುಮತಿ ಕೋರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಕುಮಾರನ್ ಕೇರಳದ ತ್ರಿಶೂರ್‌ಗೆ ಹೋಗಲು ಕೊಚ್ಚಿಗೆ ತೆರಳುವ ವಿಮಾನವೇರಿದ್ದ ಎಂದು ಮೂಲಗಳು ತಿಳಿಸಿವೆ.
ಅಸಲಿಗೆ ವಿಮಾನದಲ್ಲಿ ಆಗಿದ್ದೇನು?
ಆರೋಪಿಯ ಸಹೋದರಿಯ ತಂಗಿಯ ನವಜಾತ ಶಿಶು ಹೆರಿಗೆಯ ಸಮಯದಲ್ಲಿ ಸಾವನ್ನಪ್ಪಿತ್ತು. ಹೀಗಾಗಿ ತರಾತುರಿಯಲ್ಲಿ ಊರಿಗೆ ತೆರಳಲು ಆರೋಪಿ ವಿಮಾನ ಪ್ರಯಾಣ ಆಯ್ಕೆ ಮಾಡಿಕೊಂಡಿದ್ದ. ಭದ್ರತಾ ತಪಾಸಣೆ ಎಲ್ಲ ಮುಗಿದು ವಿಮಾನದಲ್ಲಿ ಕುಳಿತ ನಂತರವೂ ವಿಮಾನದೊಳಗಿನ ಹೆಚ್ಚುವರಿ ತಪಾಸಣೆಯಿಂದ ಆತ ಸಿಟ್ಟಾಗಿದ್ದ. ಹೀಗಾಗಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂದಿ ಬಳಿ, ನಾನೇನು ಬಾಂಬ್ ಅಥವಾ ಚಾಕುವನ್ನು ಹೊತ್ತೊಯ್ಯುತ್ತಿದ್ದೇನೆ ಎಂದು ಶಂಕಿಸಿದ್ದೀರಾ ಎಂದು ಹೇಳಿದ್ದ ಎಂಬುದಾಗಿ ಮೂಲಗಳು ತಿಳಿಸಿವೆ. ನವಜಾತ ಶಿಶುವಿನ ಮರಣವನ್ನು ದೃಢಪಡಿಸಿದ ನಂತರ, ಕುಮಾರನ್ ಕ್ಷಮೆಯಾಚಿಸಿದರೆ ಕೇವಲ ದಂಡದೊಂದಿಗೆ ಆತನನ್ನು ಬಿಟ್ಟುಬಿಡುವ ಸಾಧ್ಯತೆಯೂ ಇದೆ ಎಂದು ಮಾಧ್ಯಮ ವರದಿಯೊಂದು ಉಲ್ಲೇಖಿಸಿದೆ.