ಉಡುಪಿ : ಜನವರಿ :29: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಚರ್ಚ್ ಮುಂಭಾಗ ನಡೆದ ಗ್ಯಾಸ್ ಬುಲೆಟ್ ಟ್ಯಾಂಕರ್ ಅಪಘಾತ ನಡೆದಿದ್ದು ಪರಿಣಾಮ ಚಾಲಕನ ಎರಡು ಕಾಲುಗಳು ತುಂಡಾಗಿದೆ. ಹೆದ್ದಾರಿಯ ರಸ್ತೆ ಮಧ್ಯದಲ್ಲಿ ನವಯುಗ ಕಂಪನಿಗೆ ಸೇರಿದ ವಾಹನಗಳು ಯಾವುದೇ ಸುರಕ್ಷಿತ ನಿಯಮಗಳನ್ನು ಅನುಸರಿಸದೇ ಸ್ವಚ್ಛತೆ ಹಾಗೂ ಇನ್ನಿತರ ಕೆಲಸಗಳನ್ನು ನಡೆಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂದು ಸುಮಾರು 5:00 ಗಂಟೆ ಸಮಯಕ್ಕೆ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್ ರಸ್ತೆಯಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸದೆ ನಿಂತಿರುವ ನವಯುಗ ಕಂಪನಿಗೆ ಸೇರಿದ ವಾಹನ ಒಂದಕ್ಕೆ ಡಿಕ್ಕಿ ಹೊಡೆದಿದೆ.
ಟ್ಯಾಂಕರ್ ವಾಹನ ನಂತರ ನಿಧಾನಕ್ಕೆ ಚಲಿಸಿ ರಸ್ತೆ ಎಡಭಾಗಕ್ಕೆ ಹೋಗಿ ನಿಂತಿದೆ. ವಾಹನ ಎರಡು ಅಡಿ ಮುಂದೆ ಚಲಿಸಿದ್ದರೆ ಪಲ್ಟಿಯಾಗಿ ಕರೆಂಟ್ ಕಂಬ ಹಾಗೂ ಮನೆಗಳು ಮೇಲೆ ಬಿದ್ದು ಅನಾಹುತ ಸಂಭವಿಸುತ್ತಿತ್ತು. ಈ ಅಪಘಾತ ನವಯುಗ ಕಂಪನಿಯ ಅಜಾಗರೂಕತೆಯಿಂದ ಉಂಟಾಗಿದ್ದು ಕಂಪನಿ ಆ ಚಾಲಕನಿಗೆ ಸೂಕ್ತ ಪರಿಹಾರವನ್ನು ಒದಗಿಸಿ ಕೊಡಬೇಕು ಹಾಗೂ ಮುಂದಕ್ಕೆ ಇಂತಹ ಘಟನೆಗಳು ನಡೆಯದಂತೆ ಕಂಪೆನಿಯವರು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಆಗ್ರಹಿಸಿರುತ್ತಾರೆ.