ಚಿಕ್ಕಮಗಳೂರು:ಜನವರಿ 29: ಚಿಕ್ಕಮಗಳೂರು ಜಿಲ್ಲೆಯ ಮುಗ್ತಿಹಳ್ಳಿಯಲ್ಲಿರುವ ಆಂಬರ್ ವ್ಯಾಲಿ ವಸತಿ ಶಾಲೆಯಲ್ಲಿ ಸುಮಾರು 27 ಕಾಡಾನೆಗಳು ಆಗಮಿಸಿ ಬಿಡು ಬಿಟ್ಟಿರುವ ಹಿನೆಲೆಯಲ್ಲಿ ಇಂದು ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಮುಗ್ತಿಹಳ್ಳಿ ಬಳಿ ಇರುವ ವಸತಿ ಶಾಲೆಯೊಳಗೆ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ, ಶಾಲೆಯಲ್ಲಿರುವ ಇರುವ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ವಸತಿ ಶಾಲೆಯಿಂದ ಹೊರಗಡೆ ಬರಬೇಡಿ ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.
25 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಆಂಬರ್ ವ್ಯಾಲಿ ವಸತಿ ಶಾಲೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಗ್ತಿಹಳ್ಳಿ ಬಳಿಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ವಸತಿ ಶಾಲೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ. ಬಿಡು ಬಿಟ್ಟಿರುವ ಆನೆಗಳನ್ನು ಪುನಃ ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.