ಕಾಪು: ಜನವರಿ 29:ರಾ.ಹೆ. 66ರ ಉಳಿಯಾರಗೋಳಿ ಕೋತಲಕಟ್ಟೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾ ಮುಖೀ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.
ಸಹಸವಾರ ಪಾಂಗಾಳ ದುರ್ಗಾ ವೆಲ್ ರಿಂಗ್ ವರ್ಕ್ಸ್ ಕಾರ್ಮಿಕ ಮಲ್ಲೇಶ್ (53) ಮೃತಪಟ್ಟಿದ್ದು, ಬೈಕ್ ಸವಾರ ಜಯನ್ ಗಾಯಗೊಂಡಿದ್ದಾರೆ.
ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ಮತ್ತು ಉಳಿಯಾರಗೋಳಿ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಹೋಂಡಾ ಬೈಕ್ ಪರಸ್ಪರ ಢಿಕ್ಕಿ ಹೊಡೆದು ಕೊಂಡಿದೆ.
ಅಪಘಾತದ ರಭಸಕ್ಕೆ ಸಹ ಸವಾರನಾಗಿದ್ದ ಮಲ್ಲೇಶ್ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆಗೆ ತೀವ್ರ ಗಾಯಗಳುಂಟಾಗಿತ್ತು. ಸವಾರ ಜಯನ್ ಕಾಲು ಮುರಿತಕ್ಕೊಳಗಾಗಿದ್ದು ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಮಲ್ಲೇಶ್ ಮೃತಪಟ್ಟಿದ್ದಾರೆ. ಪಲ್ಸರ್ ಬೈಕ್ ಸವಾರ ಶ್ರೀನಿವಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.