ಕಾರ್ಕಳ: ಜನವರಿ 29: ಈದು ಗ್ರಾಮದ ನೂರಾಲ್ ಬೆಟ್ಟು ಎಂಬಲ್ಲಿ ವಿದ್ಯುತ್ ಸರಬರಾಜುನಲ್ಲಿ ಉಂಟಾದ ತಾಂತ್ರಿಕ ಸಮಸ್ಸೆಯನ್ನು ದುರಸ್ಥಿ ಪಡಿಸುತ್ತಿದ್ದಾಗ ವಿದ್ಯುತ್ ಅವಘಡದಲ್ಲಿ ಕಾರ್ಕಳ ಮೆಸ್ಕಾಂ ಸಿಬಂದಿ (ಪವರ್‌ಮನ್) ಬಾಗಲಕೋಟೆ ಮೂಲದ ಶ್ರೀನಿವಾಸ್ (28) ಮೃತಪಟ್ಟ ಘಟನೆ (ಜ. 28) ನಿನ್ನೆ ಸಂಜೆ ನಡೆದಿದೆ.
ಹೊಸ್ಮಾರು ಮೆಸ್ಕಾಂ ವಿಭಾಗಕ್ಕೆ ಸೇರಿದ ನೂರಾಳ್‌ಬೆಟ್ಟು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲವೆಂದು ಸ್ಥಳಿಯರು ಹೊಸ್ಮಾರು ಮೆಸ್ಕಾಂ ಕಚೇರಿಗೆ ಕರೆ ಮಾಡಿ ದೂರು ನೀಡಿದ್ದರು.
ದುರಸ್ತಿಗೆಂದು ಸ್ಥಳಕ್ಕೆ ತೆರಳಿದ ಶ್ರೀನಿವಾಸ್ ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಹುಡುಕುತಿದ್ದಾಗ ವಿದ್ಯುತ್ ಶಾಕ್ ಹೊಡೆದು ದುರ್ಘಟನೆ ಸಂಭವಿಸಿದೆ. ವಿದ್ಯುತ್ ಶಾಕ್‌ನಿಂದ ಅವರು ನೆಲಕ್ಕುರುಳಿದ್ದು, ಈ ವೇಳೆ ಅಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಬಳಿಕ ಸ್ಥಳಿಯರ ಗಮನಕ್ಕೆ ಬಂದಿದೆ.
ಎರಡು ವರ್ಷದ ಹಿಂದೆ ಅವರು ಮೆಸ್ಕಾಂಗೆ ಸೇರ್ಪಡೆಗೊಂಡಿದ್ದರು. ಮೃತದೇಹ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ ಶವಾಗಾರದಲ್ಲಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಘಟನೆ ತಿಳಿದು ಆಸ್ಪತ್ರೆಗೆ ಶಾಸಕ ಮಾಜಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು. ಮರಣೋತ್ತರ ಪರೀಕ್ಷೆ ಇನ್ನಿತರ ಅಗತ್ಯ ಕ್ರಮಕ್ಕೆ ಸೂಚಿಸಿದರು. ಕಾರ್ಕಳ ಉಪವಿಭಾಗ ಇಇ ನರಸಿಂಹ ಮತ್ತಿತರರಿದ್ದರು.