ಉಡುಪಿ, ಜನವರಿ 20: ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷ ಏಳು ತಿಂಗಳಿಗಿಂತಲೂ ಹೆಚ್ಚು ಕಾಲ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆಗಿ ಸೇವೆ ಸಲ್ಲಿಸಿ, ದಕ್ಷ ಹಾಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ಪ್ರಸನ್ನ ಅವರ ಕಾರ್ಯವೈಖರಿ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಅಚಾರ್ಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಸಿ. ಇ.ಓ ಅವರ ಬೀಳ್ಕೊಡುಗೆ ಹಾಗೂ ನೂತನ ಸಿ. ಇ . ಓ ಅವರಿಗೆ ಸ್ವಾಗತಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸೇವೆಯಲ್ಲಿ ವರ್ಗಾವಣೆ ಸರ್ವೇ ಸಾಮಾನ್ಯವಾಗಿದೆ. ಪ್ರಸನ್ನ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಮಸ್ಯೆಗಳು ಇದ್ದಾಗ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡು ಕೊಳ್ಳುತ್ತಿದ್ದರು. ಜಿಲ್ಲೆಯಲ್ಲಿ ಬಾಕಿ ಇರುವ ಅಭಿವೃದ್ಧಿ ಕೆಲಸ ಕಾರ್ಯಗಳ ಕಡೆ ಗಮನ ಹರಿಸಿದ್ದಾರೆ. ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ, ಅರ್ಥಪೂರ್ಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಿದ್ದಾರೆ ಎಂದರು.
ನೇಕಾರಿಕೆ, ಹಡಿಲು ಭೂಮಿ ಕೃಷಿ ಅಭಿವೃದ್ಧಿ, ಸಂಜೀವಿನಿ ಬ್ರಾಂಡ್ ಕಜೆ ಅಕ್ಕಿ, ಹೆಬ್ರಿ ಹನಿ, ಸಿ. ಇ. ಟಿ ಕೋಚಿಂಗ್, ಸಂಜೀವಿನಿ ಸ್ವ -ಸಹಾಯ ಸಂಘಗಳಿಗೆ ಪ್ರೋತ್ಸಾಹ, ಸ್ವೀಪ್ ಕಾರ್ಯಕ್ರಮ ಸೇರಿದಂತೆ ಹಲವು ನೆಲೆಗಳಲ್ಲಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಮುಂದಿನ ದಿನಗಳಲ್ಲಿ ಅವರ ವೃತ್ತಿ ಜೀವನ ಹಾಗೂ ಕೌಟುಂಬಿಕ ಜೀವನ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ನಿರ್ಗಮಿತ ಸಿ. ಇ. ಓ ಪ್ರಸನ್ನ ಮಾತನಾಡಿ, ಸಮಸ್ಯೆಗಳು ಬಂದಾಗ ಕುಗ್ಗದೆ, ಸಕಾರಾತ್ಮಕ ಚಿಂತನೆಗಳಿಂದ ಉತ್ತಮ ಕೆಲಸ ಮಾಡಲು ಸಾಧ್ಯ. ಯಾವುದೇ ಸಂದರ್ಭ ಗಳಲ್ಲಿಯೂ ಕರ್ತವ್ಯದಲ್ಲಿ ಲೋಪವಾಗದ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಹಕಾರ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ವ್ಯವಸ್ಥಿತ ರೀತಿಯಲ್ಲಿ ಇದ್ದು, ಸಿಬ್ಬಂದಿಗಳು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು ಭೂ ಸ್ವಾಧೀನ ಸಮಸ್ಯೆ, ಜಲ್ ಜೀವನ್ ಮಿಷನ್, ಸ್ಯಾನಿಟರಿ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.
ಜನರಿಗೆ ಸೇವೆ ನೀಡುವುದು ನಮ್ಮ ಆದ್ಯ ಕರ್ತವ್ಯ ಆಗಿದ್ದು, ಪ್ರಾಮಾಣಿಕವಾಗಿ ಶಕ್ತಿ ಮೀರಿ ಜನರಿಗೆ ಹಾಗೂ ಹುದ್ದೆಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ ಎಂದ ಅವರು , ತಮ್ಮ ಸೇವಾವಧಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಸಹಕಾರ ನೀಡಿದ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ, ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನೂತನ ಸಿ. ಇ. ಓ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಸಿ. ಇ.ಓ ಆಗಿ ಪ್ರಸನ್ನ ಅವರು ಮಾಡಿದ ಕೆಲಸ ಕಾರ್ಯಗಳ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ , ಪಿ.ಡಿ . ಓ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಜು ಮೊಗವೀರ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.