ಬೆಂಗಳೂರು : ಜನವರಿ 19:ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ಜನವರಿ 22 ರಂದು ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಈ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ಮಕ್ಕಳಿಗೆ ತೋರಿಸಲು ಖಾಸಗಿ ಶಾಲೆಗಳು ನಿರ್ಧರಿಸಿವೆ.
ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಸ್ಕೂಲ್ಸ್ ಇನ್ ಕರ್ನಾಟಕ (KAMS, ಖಾಸಗಿ ಶಾಲೆಗಳ ಒಕ್ಕೂಟ) ಸುತ್ತೋಲೆ ಹೊರಡಿಸಿದ್ದು “ಒಕ್ಕೂಟದ ಎಲ್ಲ ಸದಸ್ಯರು ಆಯಾ ಶಾಲೆಯಲ್ಲಿ ತಮ್ಮಲ್ಲಿರುವ ಲಭ್ಯ ವ್ಯವಸ್ಥೆಗೆ ಅನುಗುಣವಾಗಿ ಒಂದೂವರೆ ಗಂಟೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಬೇಕು ಎಂದು ಸೂಚಿಸಿದೆ.
ಕೆಎಎಂಎಸ್‌ನ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಮಾತನಾಡಿ, ಅಂದು ಶಾಲೆಗಳಿಗೆ ರಜೆ ಘೋಷಿಸದಂತೆ ತಿಳಿಸಿದ್ದೇವೆ. ಜನವರಿ 22ರ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವು ಇಡೀ ದೇಶದ ಗಮನವನ್ನು ಸೆಳೆದಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ಎಲ್ಲ ಸದಸ್ಯರು ತಮ್ಮ ತಮ್ಮ ಶಾಲೆಗಳಲ್ಲಿ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವಂತೆ ಸೂಚಿಸಲಾಗಿದೆ ಎಂದರು.
ಆಯಾ ಶಿಕ್ಷಣ ಸಂಸ್ಥೆಗಳು ರಾಜಕೀಯವನ್ನು ಹೊರಗಿಟ್ಟು ಈ ಕಾರ್ಯಕ್ರಮವನ್ನು ಮಕ್ಕಳಿಗೆ ತೋರಿಸಬೇಕು. ಈ ಮೂಲಕ ಮಕ್ಕಳಿಗೆ ರಾಮ ಜನ್ಮಭೂಮಿಯ ಮಹತ್ವವನ್ನು ತಿಳಿಸಬೇಕು. ರಜೆ ಘೋಷಿಸುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳು ಒಟ್ಟಿಗೆ ಐತಿಹಾಸಿಕ ಕ್ಷಣವನ್ನು ವೀಕ್ಷಿಸುವ ಅನುಭವವನ್ನು ಕಳೆದುಕೊಳ್ಳುತ್ತಾರೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದರು.
ನಾವು ಜನವರಿ 22 ರಂದು ಶಾಲೆಗಳಿಗೆ ರಜೆಯನ್ನು ಘೋಷಿಸುತ್ತಿಲ್ಲ. ಅದು ಕೆಲಸದ ದಿನವಾಗಿರುತ್ತದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಉಂಟಾದರೆ, ಆಯಾ ಜಿಲ್ಲಾಧಿಕಾರಿಗಳು ರಜೆ ಘೋಷಿಸಿಸುತ್ತಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.