ಅಯೋಧ್ಯ :ಜನವರಿ 17:ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ದೇಶ ಸಜ್ಜಾಗುತ್ತಿದೆ. ಅಯೋಧ್ಯೆಗೆ ದೇಶದ ವಿವಿಧ ನಗರಗಳಿಂದ ಸಂಪರ್ಕ ಒದಗಿಸುವ ಕೆಲಸವೂ ಪ್ರಗತಿಯಲ್ಲಿದೆ. ಇಂದು (ಜ.17) ಅಯೋಧ್ಯೆ ಮತ್ತು ಬೆಂಗಳೂರು, ಅಯೋಧ್ಯೆ ಮತ್ತು ಕೋಲ್ಕತ ಸಂಪರ್ಕಿಸುವ ವಿಮಾನ ಯಾನಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ ನೀಡಿದರು.
ಅಯೋಧ್ಯೆ ಮತ್ತು ಬೆಂಗಳೂರು ನಡುವಿನ ಮೊದಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟಕ್ಕೆ ಅವರು ಹಸಿರು ನಿಶಾನೆ ತೋರಿದರು.
ಆಯಾ ವಿಮಾನಗಳು ಸದ್ಯ ವಾರಕ್ಕೆ 3 ಬಾರಿ ಹಾರಾಟ ನಡೆಸಲಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ಮುಟ್ಟಿದೆ ಎಂದು ಈ ಸಂದರ್ಭದಲ್ಲಿ ಸಿಂಧಿಯಾ ಹೇಳಿದರು.
ದೆಹಲಿಯಿಂದ ಅಯೋಧ್ಯೆಗೆ ಪ್ರತಿದಿನ ವಿಮಾನ ಹಾರಾಟ ನಡೆಯಲಿವೆ. ಆದರೆ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ವಾರಕ್ಕೆ ಮೂರು ವಿಮಾನ ಹಾರಾಟ ಇರಲಿದೆ. ಭವಿಷ್ಯದಲ್ಲಿ ಈ ಹಾರಾಟದಲ್ಲಿ ಪ್ರಯಾಣಿಕರ ಸಂಖ್ಯೆ ಆಧರಿಸಿ ಹೆಚ್ಚಳವಾಗಲಿದೆ” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮುಖ್ಯ ವಾಣಿಜ್ಯ ಅಧಿಕಾರಿ (ಸಿಸಿಒ) ಅಂಕುರ್ ಗಾರ್ಗ್ ಹೇಳಿದರು.
ಟಿಕೆಟ್ ದರ ಎಷ್ಟು?
ಇಂದು ಚಾಲನೆ ಸಿಕ್ಕಿರುವ ವಿಮಾನ ವಾರದಲ್ಲಿ ಮೂರು ಬಾರಿ ಅಯೋಧ್ಯೆ – ಬೆಂಗಳೂರು ನಡುವೆ ಹಾರಾಡಲಿದೆ ಎಂದಷ್ಟೇ ಕೇಂದ್ರ ಸಚಿವರು ಹೇಳಿದ್ದಾರೆ. ಆದ್ರೆ, ಟಿಕೆಟ್ ಹಾಗೂ ಸಮಯದ ಬಗ್ಗೆ ಇನ್ನೂ ಸಂಸ್ಥೆ ಅಧಿಕೃತ ಮಾಹಿತಿ ನೀಡಿಲ್ಲ.