ಉಡುಪಿ :ಜನವರಿ 15:ಪೇಜಾವರ ಮಠದ ಕೀರ್ತಿಶೇಷ, ಪದ್ಮವಿಭೂಷಣ ಶ್ರೀವಿಶ್ವೇಶತೀರ್ಥ ಶ್ರೀಪಾದರ ಚತುರ್ಥ ಆರಾಧನೋತ್ಸವದ ಪ್ರಯುಕ್ತ ಉಡುಪಿ ಪೇಜಾವರ ಮಠದಲ್ಲಿ ರವಿವಾರ ಗುರುಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಪಲಿಮಾರು ಮಠಾಧೀಶಾದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥರು ದಿವ್ಯಸಾನಿಧ್ಯವಹಿಸಿ ಶ್ರೀವಿಶ್ವೇಶತೀರ್ಥರ ಸಾಲಂಕೃತ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿದರು
ಈ ಸಂದರ್ಭದಲ್ಲಿ ಸಂಸ್ಮರಣ ಸಂದೇಶ ನೀಡಿದ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಶ್ರೀಗಳು ಪರಮ ಕಾರುಣ್ಯಮೂರ್ತಿಯಾಗಿದ್ದು ಸಜ್ಜನ ಮತ್ತು ವಿದ್ವತ್ಪಕ್ಷಪಾತಿಯಾಗಿದ್ದರು. ಕಿರಿಯರು ಹಿರಿಯರ ಮೇಲೆ ಏಕಪ್ರಕಾರದ ಪ್ರೀತಿ ಅಭಿಮಾನಗಳನ್ನು ಧಾರೆಯೆರೆದಿರುವುದಕ್ಕೆ ತಾನೇ ಸಾಕ್ಷಿ ಎಂದರು.
ಶ್ರೀವಿದ್ಯಾಧೀಶತೀರ್ಥರು ಮಾತನಾಡಿ ಶ್ರೀಗಳು ನಡೆಸಿದ ಲೋಕೋತ್ತರ ಕಾರ್ಯಗಳು ಮತ್ತು ಆ ನೆಲೆಯಲ್ಲೇ ಪಡೆದ ಅಪಾರ ಮನ್ನಣೆಗಳನ್ನು ಸ್ಮರಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಿಂದೆ ಅವರ ದೂರದೃಷ್ಟಿ ಮತ್ತು ಕೃತುಶಕ್ತಿಯ ಪರಿಣಾಮ ಭವ್ಯ ರಾಮಂಮದಿರ ನಿರ್ಮಾಣದ ದಿವ್ಯವಸಂದರ್ಭವನ್ನು ದೇಶಕ್ಕೆ ತಂದುಕೊಟ್ಟಿದೆ ಎಂದರು.
ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಸಿಇಒ ಸುಬ್ರಹ್ಮಣ್ಯ ಭಟ್ ಮತ್ತು ಮಠದ ವಿದ್ಯಾರ್ಥಿಗಳು ಉಭಯ ಶ್ರೀಗಳನ್ನು ಸ್ವಾಗತಿಸಿದರು.
ವಿದ್ವಾಂಸರಾದ ರಾಮಚಂದ್ರ ಭಟ್, ಗೋಪಾಲ ಜೋಯಿಸ್ , ಬಾಲಕೃಷ್ಣ ಭಟ್ ನೀರೆ, ಹೆರ್ಗ ಹರಿಪ್ರಸಾದ, ನರಸಿಂಹ ಭಟ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರೊ.ಎಂ ಬಿ ಪುರಾಣಿಕ್, ಮಾಜಿ ಶಾಸಕ ರಘುಪತಿ ಭಟ್, ಉಮೇಶ್ ರಾವ್, ಮುರಲಿ ಕಡೆಕಾರ್, ಎಸ್ ವಿ. ಭಟ್, ಗಂಗಾಧರ ರಾವ್ ಮುಂತಾದವರು ಉಪಸ್ಥಿತರಿದ್ದರು.
ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
.