ಉಡುಪಿ : ಜನವರಿ 14:ದ್ರಶ್ಯ ನ್ಯೂಸ್ :ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದಜಿ ಐ ಟ್ಯಾಗ್ ಪಡೆದಿರುವ ಉಡುಪಿ ಸೀರೆಗಳು ಬಹಳ ಸದ್ದು ಮಾಡುತ್ತಿವೆ ಮತ್ತು ಜನಪ್ರಿಯವಾಗುತ್ತಿವೆ. ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಸೇರಿಕೊಂಡು ಉಡುಪಿ ಸೀರೆಗಳ ಉತ್ಪಾದನಾ ಮತ್ತು ಮಾರುಕಟ್ಟೆ ಕ್ಷೇತ್ರಗಳನ್ನು ವಿಸ್ತರಿಸಿ, ಜನಪ್ರಿಯಗೊಳಿಸುವ ಸಾಧ್ಯತೆಗಳ ಬಗ್ಗೆ ಅನ್ವೇಷಿಸುತ್ತಿರುವ ಸಂದರ್ಭದಲ್ಲಿ, ಕಾಕತಾಳಿಯವೆಂಬಂತೆ ಇದರ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಜಿಲ್ಲಾಡಳಿತದ ಮೂಲಕ ಸಹಾಯ ಹಸ್ತ ಚಾಚಿ ಉಡುಪಿ ಸೀರೆಗಳ ಪುನಶ್ಚೇತನಕ್ಕೆ ಜೀವ ತುಂಬಿದವರು ಉಡುಪಿಯ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್.
ಉಡುಪಿ ಸೀರೆಗಳನ್ನು ನೇಯುವ ಎಲ್ಲಾ ನೇಕಾರರು ಹಿರಿಯರಾಗಿದ್ದು, ಯುವ ಪೀಳಿಗೆಯ ನೇಕಾರರ ಕೊರತೆಯನ್ನು ನೀಗಿಸಲು, ತರಬೇತಿ ವೇತನ ಸಹಿತ 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿಯನ್ನು ನೀಡಿದರೆ ಮಾತ್ರ ಹೊಸ ಪೀಳಿಗೆಯ ನೇಕಾರರನ್ನು ಕರೆ ತರುವುದು ಸಾಧ್ಯ ಎಂಬ ನಮ್ಮ ಅನಿಸಿಕೆಯನ್ನು ಪ್ರೊಬೇಶನರಿ ಐ.ಎ.ಎಸ್ ಅಧಿಕಾರಿ ಓರ್ವರ ಮೂಲಕ ಶ್ರೀ ಪ್ರಸನ್ನ ಎಚ್ ರವರು ಅಧ್ಯಯನ ಮಾಡಿಸಿದರು. ಗ್ರಾಮೀಣ ಸೊಗಡನ್ನು ಬಿಂಬಿಸುವ ಉಡುಪಿ ಸೀರೆಗಳ ಕಲಾ ಕೌಶಲ್ಯ ಸಹಿತ ಹಲವಾರು ವೈಶಿಷ್ಟ್ಯಗಳನ್ನು ಗುರುತಿಸಿ, ಇದರ ಪುನಶ್ಚೇತನದ ಅವಶ್ಯಕತೆಯನ್ನು ಮನಗಂಡು, ಅಂದಿನ ಜಿಲ್ಲಾಧಿಕಾರಿಯವರಿಗೆ ಮನದಟ್ಟು ಮಾಡಿಸಿದರು.
ಈ ಮೂಲಕ ಜಿಲ್ಲಾ ಖನಿಜ ನಿಧಿಯ ಅನುದಾನದಿಂದ, ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ 25 ಮಹಿಳೆಯರು 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿ ಪಡೆಯಲು ಕಾರಣೀಕರ್ತರಾದರು. ಅವರಲ್ಲಿ 22 ಮಹಿಳೆಯರು ಈಗಾಗಲೇ ಕೈಮಗ್ಗದ ನೇಕಾರಿಕೆ ವೃತ್ತಿ ಮಾಡಲು ಆರಂಭಿಸಿರುವುದು ಉಲ್ಲೇಖನೀಯ.
ಉಡುಪಿ ಸೀರೆಗಳ ಉತ್ಪಾದನೆ ಗಣನೀಯವಾಗಿ ಏರಲು ಇನ್ನೊಂದು ತರಬೇತಿ ಕಾರ್ಯಾಗಾರದ ಅವಶ್ಯಕತೆಗಳ ಬಗ್ಗೆ ತಿಳಿಸಿದಾಗ, ನಬಾರ್ಡ್ ಮತ್ತು ರೋಬೊಸೋಪ್ಟ್ ಟೆಕ್ನಾಲಜಿಸ್ ನ ಸಿ.ಎಸ್.ಆರ್ ಅನುದಾನಗಳು ಶೀಘ್ರದಲ್ಲಿ ಬಿಡುಗಡೆಯಾಗಿ, 30 ಮಹಿಳೆಯರಿಗೆ ತಲಾ ರೂ. 8,000/- ತರಬೇತಿ ವೇತನ ಸಹಿತ ಕೈಮಗ್ಗದ ನೇಯ್ಗೆ ತರಬೇತಿ ಆರಂಭಿಸಲು ಕಾರಣೀಕರ್ತರಾಗಿದ್ದಾರೆ.
ತರಬೇತಿಯ ಬಳಿಕ ಸೀರೆಗಳ ಉತ್ಪಾದನೆಗೆ ಮತ್ತು ಹೊಸ ತರಬೇತಿಗೆ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಮನಗಂಡು, ತಾತ್ಕಾಲಿಕ ವ್ಯವಸ್ಥೆಯಾಗಿ 50 ಕೈಮಗ್ಗಗಳನ್ನು ಇಡುವಷ್ಟು ದೊಡ್ಡ ಸ್ಥಳವನ್ನು ಉಡುಪಿ ಬನ್ನಂಜೆಯಲ್ಲಿರುವ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಒದಗಿಸಿಕೊಟ್ಟು, ಕೈಮಗ್ಗ ನೇಯ್ಗೆ ಕೇಂದ್ರ ಸ್ಥಾಪಿಸಲು ಸಕಲ ವ್ಯವಸ್ಥೆ ಮಾಡಿ, ಈ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಮುನ್ನುಡಿ ಬರೆದಿದ್ದಾರೆ.
ಉಡುಪಿ ಸೀರೆಗಳು ಭಾರೀ ಜನಪ್ರಿಯತೆ ಮತ್ತು ಬೇಡಿಕೆ ಪಡೆಯುವ ದಿನಗಳು ದೂರವಿಲ್ಲ. ಆದರೂ, ಉಡುಪಿಯ ಸಮಸ್ತ ನೇಕಾರ ಸಮುದಾಯ, ಉಡುಪಿ ಸೀರೆಗಳ ಪುನಶ್ಚೇತನದ ಮೊದಲ ಮೆಟ್ಟಿಲನ್ನು ಹತ್ತಿಸಿದ ಶ್ರೀ ಪ್ರಸನ್ನ ಎಚ್, ಐ.ಎ.ಎಸ್ ರವರನ್ನು ಎಂದೂ ಮರೆಯದು. ಉಡುಪಿ ಸೀರೆಗಳ ಪುನಶ್ಚೇತನ ಮಾಡಬೇಕೆನ್ನುವ ನಮ್ಮ ಕನಸುಗಳು ಚಿಗುರೊಡೆದ ಸಂದರ್ಭದಲ್ಲಿಯೇ ಉಡುಪಿ ಜಿಲ್ಲಾ ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿಯಾಗಿ ಇವರು ಬಂದದ್ದು ನೇಕಾರ ಸಮುದಾಯದ ಸುಯೋಗ ಎಂದೇ ಹೇಳಬೇಕು.
ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಯಾಗಿ ಉಡುಪಿಯ ಗ್ರಾಮೀಣ ಸೊಗಡನ್ನು ಅಭಿವೃದ್ಧಿ ಪಡಿಸಲು ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಿರುವುದನ್ನು ನಾವು ಕಂಡಿದ್ದೇವೆ. ವರ್ಗಾವಣೆ ಹೊಂದುತ್ತಿರುವ ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಎಚ್, ಐ.ಎ.ಎಸ್ ರವರ ಭವಿಷ್ಯ ಉಜ್ವಲವಾಗಲಿ ಎಂದು ಸಮಸ್ತ ನೇಕಾರರ ಪರವಾಗಿ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿ ಶುಭ ಹಾರೈಸಿದ್ದಾರೆ