ಬೆಂಗಳೂರು :ಜನವರಿ 6:ಶಕ್ತಿ ಯೋಜನೆಯನ್ನು ಖಾಸಗಿ ಬಸ್ಗಳಿಗೂ ವಿಸ್ತರಿಸುವಂತೆ ಕೋರಿ ಕಾರ್ಕಳದ ಖಾಸಗಿ ಬಸ್ ನಿರ್ವಾಹಕ ಶರತ್ ಕುಮಾರ್ ಶೆಟ್ಟಿ ಅವರು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರ ಎರಡು ತಿಂಗಳೊಳಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಖಾಸಗಿ ಬಸ್ ನಿರ್ವಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಖಾಸಗಿ ಬಸ್ ನಿರ್ವಾಹಕರಿಗೂ ಯೋಜನೆ ಅನ್ವಯವಾಗಬೇಕು. ಸರ್ಕಾರಿ ಬಸ್ಗಳಂತೆ ಮಹಿಳೆಯರ ಪ್ರಯಾಣ ವೆಚ್ಚವನ್ನು ಖಾಸಗಿ ಬಸ್ ನಿರ್ವಾಹಕರಿಗೆ ಮರುಪಾವತಿ ಮಾಡಬೇಕು’ ಎಂದು ಶರತ್ ಅವರು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದರು. ಜುಲೈನಲ್ಲಿ ಈ ಬಗ್ಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ರಾಜ್ಯ ಸರ್ಕಾರ ಮತ್ತು ಆರ್ಟಿಒಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ಕರ್ನಾಟಕದಲ್ಲಿ ಸುಮಾರು 75,000 ಕಾರ್ಮಿಕರು ಖಾಸಗಿ ಬಸ್ಗಳನ್ನು ಅವಲಂಬಿಸಿದ್ದಾರೆ. ಖಾಸಗಿ ಬಸ್ ನಿರ್ವಾಹಕರಿಂದ ರಾಜ್ಯ ಸರ್ಕಾರ 1620 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುತ್ತದೆ ಎನ್ನಲಾಗಿದೆ.
ಶಕ್ತಿ ಯೋಜನೆ ಜಾರಿಯಾದ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಾಗೊಂದು ವೇಳೆ ಯೋಜನೆ ಜಾರಿಗೊಳಿಸುವುದೇ ಆದರೆ ಖಾಸಗಿ ಬಸ್ಗಳನ್ನೂ ಯೋಜನೆಯಡಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದರು. ಶಕ್ತಿ ಯೋಜನೆಯ ಪರಿಣಾಮ ಮಹಿಳೆಯರೆಲ್ಲ ಸರ್ಕಾರಿ ಬಸ್ಗಳಲ್ಲೇ ಪ್ರಯಾಣಿಸುವುದರಿಂದ ಖಾಸಗಿ ಬಸ್ಗಳಿಗೆ ನಷ್ಟವಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು.