ಉಡುಪಿ : ಜನವರಿ 01: ಹೊಸ ವರ್ಷವನ್ನು ದ.ಕ. ಮತ್ತು ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಅರ್ಪಿಸಿ ಸ್ವಾಗತಿಸಿದರು. ರವಿವಾರ ಸಂಜೆ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ರವಿವಾರ ಬಲಿಪೂಜೆ ಅರ್ಪಿಸಿದರು.
ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡುವುದರೊಂದಿಗೆ ವಿಶ್ವಶಾಂತಿಗಾಗಿ ನಮ್ಮಿಂದಾಗುವ ಪ್ರಯತ್ನ ಮಾಡುವಂತೆ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದರು.
ಮಿಲಾಗ್ರಿಸ್ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ರೆ| ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ರೆ| ಜೋಯ್ ಅಂದ್ರಾದೆ, ಅತಿಥಿ ಧರ್ಮಗುರು ರೆ| ಹೆಕ್ಟೆರ್ ಡಿ’ ಸೋಜಾ, ನಿತೇಶ್ ಡಿ’ಸೋಜಾ, ರೆ| ರೋನ್ಸನ್ ಡಿ’ಸೋಜಾ ಉಪಸ್ಥಿತರಿದ್ದರು.
ಶಿರ್ವ ಆರೋಗ್ಯ ಮಾತೆಯ ದೇವಾ ಲಯದಲ್ಲಿ ಧರ್ಮಗುರು ರೆ| ಡಾ| ಲೆಸ್ಲಿ ಡಿ’ಸೋಜಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮ ಗುರು ರೆ| ಚಾಲ್ಸ…ì ಮಿನೇಜಸ್, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ರೆ| ಸ್ಟ್ಯಾನಿ ತಾವೊ›, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ರೆ| ಆಲ್ಬನ್ ಡಿ’ಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ರೆ| ಡೆನಿಸ್ ಡೆಸಾ ನೇತೃತ್ವದಲ್ಲಿ ಹೊಸ ವರ್ಷ ಆಚರಣೆಯ ಪ್ರಯುಕ್ತ ಬಲಿಪೂಜೆ ನೆರವೇರಿಸಿದರು. ಚರ್ಚು ಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಕೇಕ್ ವಿತರಣೆ ನಡೆಯಿತು. ಬಲಿಪೂಜೆಯ ಬಳಿಕ ಕ್ರೈಸ್ತ ಭಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.