ಮಂಗಳೂರು: ಮಂಗಳೂರು- ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವೀಡಿಯೊ ಲಿಂಕ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30, ಶನಿವಾರದಂದು ಚಾಲನೆ ಮಾಡಿದರು.
ಕರಾವಳಿ ಜಿಲ್ಲೆಯ ಬಹುದಿನದ ಬೇಡಿಕೆಯಾದ ಮಹಾನಗರಗಳನ್ನು ಜೋಡಿಸುವ ಸೆಮಿ ಹೈ ಸ್ಪೀಡ್ ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಶನಿವಾರ ಒಂದೇ ದಿನ ಮರುಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸುವುದರೊಂದಿಗೆ ಎರಡು ಅಮೃತ ಭಾರತ್ ಮತ್ತು 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಅವುಗಳಲ್ಲಿ ಕೆಲವು ವರ್ಚುವಲ್ ಮೂಲಕ ಉದ್ಘಾಟನೆಗೊಂಡಿವೆ.
ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯ ವಂದೇ ಭಾರತ್ ರೈಲಿನಲ್ಲಿ ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್ ಗಳ ವ್ಯವಸ್ಥೆ, ಆನ್ ಬೋರ್ಡ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ, ಆನ್ಬೋರ್ಡ್ ವೈ-ಫೈ ಮತ್ತು ರೀಡಿಂಗ್ ಲೈಟ್ ಗಳ ಸೌಲಭ್ಯ, ಸ್ವಯಂಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧಾರಿತ ವಾಶ್ ಬೇಸಿನ್ ಸೌಲಭ್ಯಗಳಿವೆ.