ಉಡುಪಿ :ಡಿಸೆಂಬರ್ 29:ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜನಪರ ಉತ್ಸವ – ವಿಶೇಷ ಘಟಕ ಯೋಜನೆ ಯಡಿ ಸಾಂಸ್ಕೃತಿಕ ಕಾರ್ಯಕ್ರಮ ಡಿ.30ರಂದು ಸಂಜೆ 5:30ಕ್ಕೆ ನಗರದ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ನಡೆಯಲಿದೆ
ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಯಶ್‌ಪಾಲ್ ಎ.ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು, ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್ ಮತ್ತು ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ರಾಯಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಭುಜಂಗ ಪಾರ್ಕ್ ವರೆಗೆ ಜನಪದ ತಂಡಗಳ ಮೆರವಣಿಗೆ ನಡೆಯ ಲಿದ್ದು, ನಂತರ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರಿಂದ ಸುಗಮ ಸಂಗೀತ, ಕಂಸಾಳೆ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ, ತಮಟೆ ವಾದನ, ಕಂಗೀಲು, ಹಾಲಕ್ಕಿ ಸುಗ್ಗಿ ಕುಣಿತ, ಕೊಂಬು ಕಹಳೆ, ಚೆನ್ನು ಕುಣಿತ, ಡೊಳ್ಳುಕುಣಿತ, ಚಂಡೆವಾದನ, ಗೊರವರ ಕುಣಿತ, ಮಹಿಳಾ ಡೊಳ್ಳು, ಚಿಟ್ಟಿ ಮೇಳ, ಕರಗ ಕೋಲಾಟ, ಕಹಳೆ ವಾದನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.