ಉಡುಪಿ : ಡಿಸೆಂಬರ್ 28: ದ್ರಶ್ಯ ನ್ಯೂಸ್ :ಪೇಜಾವರ ಮಠದ ಪದ್ಮ ವಿಭೂಷಣ ಕೀರ್ತಿಶೇಷ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪಾಜಕದಲ್ಲಿ ಸ್ಥಾಪಿಸಿದ ಆನಂದತೀರ್ಥ ವಿದ್ಯಾಲಯ ಸಂಸ್ಥೆಯ ದಶಮಾನೋತ್ಸವ ಆಚರಿಸಲಾಗುತ್ತಿದ್ದು ಶ್ರೀ ಗಳವರ ಸಂಸ್ಮರಣೆಗಾಗಿ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಶ್ರೀ ಗಳವರ ಸಾಮಾಜಿಕ,ಧಾರ್ಮಿಕ ಕಾರ್ಯಗಳಿಂದ ಆಕರ್ಷಿತಗೊಂಡು ಹಲವು ದಶಕಗಳ ಅವರ ಒಡನಾಟದಲ್ಲಿ ಅನೇಕ ಕಡೆ ಅವರೊಂದಿಗೆ ಸಂಚರಿಸಿ ತೆಗೆದಿರುವ ಹಳೆಯ ಛಾಯಾಚಿತ್ರಗಳು ಈ ಪ್ರದರ್ಶನದಲ್ಲಿವೆ. ಪ್ರಮುಖವಾಗಿ ಉತ್ತರ ಭಾರತ ಯಾತ್ರೆ ಸಂದರ್ಭದಲ್ಲಿ ದೆಹಲಿ, ಬೋದ್ ಗಯಾ, ಹರಿದ್ವಾರ, ಕಾಶಿ, ಗಯಾ, ಅಯೋಧ್ಯೆ, ಬದರಿನಾಥ ಮುಂತಾದ ತೀರ್ಥಕ್ಷೇತ್ರಗಳ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.
ವಿಜಯ ಕರ್ನಾಟಕ ಪತ್ರಿಕಾ ಛಾಯಾಗ್ರಾಹಕ ಅರುಣಾಚಲ ಹೆಬ್ಬಾರ್ ಈ ಪ್ರದರ್ಶನವನ್ನು ಆಯೋಜಿಸಿದ್ದು ಈ ಹಿಂದೆ ಶ್ರೀ ಗಳವರು ಪೀಠಾರೋಹಣ ಮಾಡಿ 60 ವರ್ಷಗಳಾದ ಪ್ರಯುಕ್ತ ಉಡುಪಿ ಗಾಂಧಿ ಶಾಲೆಯಲ್ಲಿ ಶ್ರೀ ಗಳವರ 4 ನೇ ಪರ್ಯಾಯ ಸಂದರ್ಭದಲ್ಲಿ ಪೇಜಾವರ-60 ಮತ್ತು ಶ್ರೀ ಗಳವರಿಗೆ 80 ವರ್ಷಗಳಾದ ಪ್ರಯುಕ್ತ ಗೀತಾಮಂದಿರದಲ್ಲಿ ಯತಿಯಾತ್ರಾ ಎಂಬ ಶೀರ್ಷಿಕೆಯಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದರು.
ಆನಂದ ತೀರ್ಥ ವಿದ್ಯಾಲಯದ ಅಧ್ಯಕ್ಷರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಛಾಯಾಚಿತ್ರ ಪ್ರದರ್ಶನ ವನ್ನು ಉದ್ಘಾಟಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಎನ್ ನಾಗರಾಜ ಬಲ್ಲಾಳ್, ಶಿಕ್ಷಣ ತಜ್ಞ ಭಾಸ್ಕರ ರಾವ್, ಸಂಸ್ಥೆಯ ಟ್ರಸ್ಟಿಗಳಾದ ಶ್ರೀಮತಿ ರೂಪಾ ಬಲ್ಲಾಳ್, ಶ್ರೀ ಹರಿಭಟ್, ಶ್ರೀ ಸುದರ್ಶನ ರಾವ್, ಶ್ರೀ ಲಕ್ಷ್ಮೀನಾರಾಯಣ, ಶ್ರೀ ಸುದರ್ಶನ ಸಾಮಗ, ಪಿಯು ಕಾಲೇಜಿನ ಪ್ರಾಂಶುಪಾಲ ವಿಜಯ ರಾವ್, ಶಾಲೆಯ ಪ್ರಿನ್ಸಿಪಾಲರಾದ ಶ್ರೀಮತಿ ಗೀತಾ ಕೋಟ್ಯಾನ್, ಅರುಣಾಚಲ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು, ಪ್ರದರ್ಶನವು ಶನಿವಾರದವರೆಗೆ ನಡೆಯಲಿದೆ.