ಮಂಗಳೂರು ಡಿಸೆಂಬರ್ 25 : ಮಂಗಳೂರಿನ ಪ್ರಮುಖ ರಸ್ತೆಯಾದ ಕೆಎಸ್ ರಾವ್ ರಸ್ತೆಯ ಸಿಟಿ ಸೆಂಟರ್ ಸಮೀಪ ಭೂಗತ ಕೆಬಲ್ ಆಳಡಿಸಲು ತೋಡಿದ್ದ ಗುಂಡಿಗೆ ಬೈಕ್ ಸವಾರನೊಬ್ಬ ಬೈಕ್ ಸಮೇತ ಬಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.
ಸ್ಮಾರ್ಟ್ ಸಿಟಿಯಾದ ಮಂಗಳೂರಿನಲ್ಲಿ ರೋಡ್ ಗಳು ಸ್ಮಾರ್ಟ್ ಆದರೂ ಇನ್ನೂ ಕಾಂಕ್ರಿಟ್ ರಸ್ತೆ ಅಗೆದು ಕೇಬಲ್ ಆಳವಡಿಸುವ ಕಾರ್ಯ ನಡೆಯುತ್ತಿದೆ. ಮೆಸ್ಕಾಂ ಅವರ ಭೂಗತ ಕೇಬಲ್ ಆಳವಡಿಸುವ ಕಾರ್ಯ ನಗರಾದ್ಯಂತ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆಗಳನ್ನು ಅಗೆದು ಯಾವುದೇ ಸುರಕ್ಷತೆ ಇಲ್ಲದೆ ಹಾಗೆ ಬಿಟ್ಟಿದ್ದಾರೆ.
ಅಂತಹುದೇ ಒಂದು ಗುಂಡಿ ಮಂಗಳೂರಿನ ಸಿಟಿ ಸೆಂಟರ್ ಬಳಿ ಇದ್ದು, ಈ ಗುಂಡಿಗೆ ಬೈಕ್ ಸವಾರನೊಬ್ಬ ಬೈಕ್ ಸಮೇತ ಬಿದ್ದಿದ್ದಾನೆ. ಅದೃಷ್ಠವಶಾತ್ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ನಗರದ ಜನನಿಬಿಡ ರಸ್ತೆಯಲ್ಲೇ ಈ ರೀತಿ ಅವೈಜ್ಞಾನಿಕವಾಗಿ ಗುಂಡಿ ತೋಡಿದ್ದು, ರಾತ್ರಿ ಸರಿಯಾಗಿ ಕಾಣೆದೆ ವಾಹನ ಸವಾರರು ಹೊಂಡಕ್ಕೆ ಬೀಳುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಅದರ ಕಡೆ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.