ದಾವಣಗೆರೆ:ಡಿಸೆಂಬರ್ 24:ವೀರಶೈವ-ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಒಂದಾಗುವ ಸಮಯ ಬಂದಿದೆ. ಸಮಾಜದ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಂದಾಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬಾಪೂಜಿ ಎಂ.ಬಿ.ಎ.ಕಾಲೇಜು ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ವೀರಶೈವ-ಲಿಂಗಾಯತ 24ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಸಚಿವರು, ಭವಿಷ್ಯದಲ್ಲಿ ನಮ್ಮ ಸಮಾಜ ಮತ್ತಷ್ಟು ಸದೃಢವಾಗಬೇಕಾದರೆ, ನಾವು ಇಂದು ಒಂದಾಗಬೇಕು. ಸಮಾಜದ ಮಗಳಾಗಿ, ಸರ್ಕಾರದ ಮಂತ್ರಿಯಾಗಿ, ವೀರಶೈವ ಸಮಾಜ ಕೈಗೊಂಡ ಎಲ್ಲ ನಿರ್ಣಯಗಳಿಗೆ ನನ್ನ ಬೆಂಬಲವಿದೆ ಎಂದು ಸಚಿವರು ಹೇಳಿದರು.
ನಮ್ಮ ಸಮಾಜ ಒಂದಾದರೆ ಎಲ್ಲ ಹಂತದಲ್ಲಿ ನಮಗೆ ನ್ಯಾಯ ಸಿಗತ್ತೆ. ಇಂದು ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ವಿಘಟನೆ ಹಾದಿ ಬಿಟ್ಟು ಸಂಘಟನೆ ಹಾದಿಗೆ ಮರಳಬೇಕು. ವೀರಶೈವ ಲಿಂಗಾಯತ ಒಳ ಪಂಗಡಗಳು ಒಂದಾದರೆ ನಮ್ಮ ಬಲ ಮತ್ತಷ್ಟು ವೃದ್ಧಿಯಾಗುತ್ತದೆ. ಆಗ ಸರ್ಕಾರದಲ್ಲಿ ವೀರಶೈವ ಸಮುದಾಯ ಇರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಹಾ ಅಧಿವೇಶನದಲ್ಲಿ ಸಚಿವೆಯಾಗಿ ಪಾಲ್ಗೊಳ್ಳುತ್ತಿರುವುದು ವೈಯಕ್ತಿಕವಾಗಿ ಖುಷಿ ನೀಡಿದೆ. ಅಧಿವೇಶನದಲ್ಲಿ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಲಿಂಗಾಯತರು ಸುಧಾರಿಸಿದರೆ ಇಡೀ ರಾಜ್ಯ ಸುಧಾರಿಸುತ್ತದೆ. ಆರ್ಥಿಕವಾಗಿ ನಮ್ಮ ಸಮುದಾಯ ಸದೃಢವಾಗಬೇಕು. ನಾವು ಸದೃಢರಾಗಿ ಇತರ ಸಮುದಾಯವನ್ನು ಜತೆಗೆ ಕರೆದುಕೊಂಡು ಹೋಗಬೇಕು ಎಂದು ಸಚಿವರು ಹೇಳಿದರು.
ವೇದಿಕೆಯಲ್ಲಿ ವಿವಿಧ ಮಠಾಧೀಶರು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರು ಹಾಗೂ ಅಖಿಲ ಭಾರತ ವೀರಶೈವ-ಮಹಾಸಭಾದ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ಸೇರಿದಂತೆ ಸಮುದಾಯದ ಹಲವು ಗಣ್ಯರು ಉಪಸ್ಥಿತರಿದ್ದರು.