ಬೆಂಗಳೂರು: ಡಿಸೆಂಬರ್ 21: ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಡಿ. 26ರಿಂದ ಚಾಲನೆ ದೊರೆಯಲಿದ್ದು, ಸ್ವಾಮಿ ವಿವೇಕಾನಂದ ಜನ್ಮದಿನದಂದು ಅಂದರೆ ಜ. 12ಕ್ಕೆ ನಿರುದ್ಯೋಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮೆ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದರು.
ಜ. 12ರಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ‘ಯುವನಿಧಿ’ಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. 5.30ಲಕ್ಷ ಫಲಾನುಭವಿಗಳು ಇರುವುದಾಗಿ ಅಂದಾಜಿಸಲಾಗಿದ್ದು, ಇದರಲ್ಲಿ 4.81 ಲಕ್ಷ ಪದವೀಧರರು ಮತ್ತು 48,153 ಡಿಪ್ಲೊಮಾ ತೇರ್ಗಡೆಯಾದವರು ಆಗಿದ್ದಾರೆ. 2023- 24ನೇ ಸಾಲಿನಲ್ಲಿ ಪಾಸಾದವರು ಈ ನಿರುದ್ಯೋಗ ಭತ್ಯೆಗೆ ಅರ್ಹರಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು.