ಉಡುಪಿ : ಡಿಸೆಂಬರ್ 20:ದ್ರಶ್ಯ ನ್ಯೂಸ್ : ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿಟ್ಟೂರು ಮಹಿಳಾ ನಿಲಯದಲ್ಲಿ ಹಲವು ವರ್ಷಗಳಿಂದ ಆಶ್ರಯ ಪಡೆದಿರುವ ಇಬ್ಬರು ಯುವತಿಯರಿಗೆ ಕಂಕಣ ಭಾಗ್ಯ ನೆರೆವೇರಿತು.ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುಟುಂಬ ಹಿರಿಯರ ಸ್ಥಾನದಲ್ಲಿ ನಿಲ್ಲುವ ಮೂಲಕ ಇಬ್ಬರು ಯುವತಿಯರ ಕೌಟುಂಬಿಕ ಬದುಕಿನ ಭವಿಷ್ಯಕ್ಕೆ ನೆರವಾಗುವ ಮೂಲಕ ಮಾದರಿ ವಿವಾಹ ಕಾರ್ಯಕ್ರಮಕ್ಕೆ ನಿಟ್ಟೂರಿನಲ್ಲಿರುವ ಮಹಿಳಾ ನಿಲಯ ಸಾಕ್ಷಿಯಾಯಿತು.ಮಹಿಳಾ ನಿಲಯದ ಸಭಾಂಗಣದಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಯಿತು.
ಶೀಲಾ ಅವರ ವಿವಾಹ ಕುಂದಾಪುರ, ಮೊಳಹಳ್ಳಿಯ ಕೃಷಿಕ ವೃತ್ತಿಯಲ್ಲಿರುವ ಗಣೇಶ ಶಾಸ್ತ್ರಿ ಅವರೊಂದಿಗೆ, ಕುಮಾರಿ ಅವರ ವಿವಾಹ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಪ್ರಸ್ತುತ ಹೆಬ್ರಿಯಲ್ಲಿ ಅರ್ಚಕರಾಗಿರುವ ಶ್ರೀಧರ್ ಭಟ್ ಅವರೊಂದಿಗೆ ನೆರವೇರಿತು.
ಜಿಲ್ಲಾಧಿಕಾರಿ ಡಾ ಕೆ. ವಿದ್ಯಾಕುಮಾರಿ ಅವರು ಎರಡು ಜೋಡಿಗಳಿಗೆ ಧಾರೆ ಎರೆಯುವ ಮೂಲಕ ಹೆತ್ತವರ ಸ್ಥಾನ ತುಂಬಿದರು.
ವಿವಾಹ ಭೋಜನಕ್ಕೆ ಅನ್ನ, ಸಾರು, ಪಲಾವ್, ಕುರ್ಮ, ಪಲ್ಯ, ಪಾಯಸ, ಲಡ್ಡು, ಮಜ್ಜಿಗೆ, ಜ್ಯೂಸ್, ಐಸ್‌ಕ್ರೀಂ ವ್ಯವಸ್ಥೆ ಮಾಡಲಾಗಿತ್ತು.
ಸಮಾರಂಭದ ಅನಂತರ ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ಅವರ ಉಪಸ್ಥಿತಿಯೊಡನೆ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಪ್ರಕ್ರಿಯೆ ನಡೆಯಿತು.
ಮದುವೆ ಮುಹೂರ್ತದ ಶುಭ ಸಂದರ್ಭದಲ್ಲಿ ನವ ಜೋಡಿಗಳಿಗೆ ಧಾರೆ ಮುಹೂರ್ತದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಹಿರಿಯ ಸಿವಿಲೆ ನ್ಯಾಯಾಧೀಶೆ ಶರ್ಮಿಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಎಸ್, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಮಹಿಳಾ ಸಂಘ-ಸoಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಸೇರಿದಂತೆ ಮತ್ತಿತರರು ಆಶೀರ್ವದಿಸಿದರು.