ಬೆಳಗಾವಿ :ಡಿಸೆಂಬರ್ 05 : ದ್ರಶ್ಯ ನ್ಯೂಸ್ :ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿ ಸವದತ್ತಿ ಕ್ಷೇತ್ರದ ಯರಗಟ್ಟಿ ರೈತರು ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯಗೆ ನೇಗಿಲು ಕೊಡುಗೆ ನೀಡಿದರು. ಯರಗಟ್ಟಿಯಿಂದ ಸುಮಾರು 75 ಕಿ.ಮೀ. ಪಾದಯಾತ್ರೆ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಆಗಮಿಸಿದ್ದರು
ಯರಗಟ್ಟಿ ತಾಲೂಕು ಘೋಷಣೆಯಾಗಿ ಮೂರು ವರ್ಷ ಆಗಿದೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಬೆಳಗಾವಿ ಜಿಲ್ಲೆಯ ಬಹು ದಿನಗಳ ರೈತರ ಬೇಡಿಕೆಯಾದ ಕಳಸಾ-ಬಂಡೂರಿ ಯೋಜನೆ, ಸತ್ತಿಗೇರಿ ಏತ ನೀರಾವರಿ 2ನೇ ಹಂತದ ಏತ ನೀರಾವರಿ, ಲಕ್ಷ್ಮೀದೇವಿ-ಕಡಜ ಏತ ನೀರಾವರಿ ಎಳ್ಳಾರಿ ನಾಲಾ ಯೋಜನೆಗಳು ಶೀಘ್ರದಲ್ಲಿ ಅನುಷ್ಠಾನ ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದರು
ನೂತನ ತಾಲೂಕು ಯರಗಟ್ಟಿಗೆ ಎಲ್ಲ ಸರ್ಕಾರಿ ಕಚೇರಿಗಳಾದ, ಪೊಲೀಸ್ ಠಾಣೆ, ಸಬ್ ರಿಜಿಸ್ಟ್ರಾರ್ ಆಫೀಸ್, ತಾಲೂಕು ಪಂಚಾಯತಿ, ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರವನ್ನು ಸಾರ್ವಜನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ವಿವಿಧ ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟರು. ಸುವರ್ಣಸೌಧದಲ್ಲೇ ಸಿಎಂಗೆ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು. ಬಳಿಕ ತಾವು ತಂದಿದ್ದ ನೇಗಿಲನ್ನು ಸಿಎಂಗೆ ಗಿಫ್ಟ್ ಆಗಿ ನೀಡಿದರು. ಸಿಎಂ ಸಿದ್ದರಾಮಯ್ಯ ನೇಗಿಲನ್ನು ತಮ್ಮ ಹೆಗಲ ಮೇಲೇರಿಸಿಕೊಳ್ಳುವ ಮೂಲಕ ಗಮನ ಸೆಳೆದರು