ಬೆಳಗಾವಿ :ಡಿಸೆಂಬರ್ 05 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣಸೌಧದ ಶಾಶ್ವತ ವಿದ್ಯುತ್ ಅಲಂಕಾರವನ್ನು ಉದ್ಘಾಟಿಸಿದರು.
ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ , ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಸೇರಿ ಹಲವು ಸಚಿವರು ಮತ್ತು ಎಲ್ಲಾ ಶಾಸಕರು ಈ ಸಂದರ್ಭಕ್ಕೆ ಸಾಕ್ಷಿಯಾದರು.
ನಾಡಿಗೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮದ ಪ್ರಯುಕ್ತ ಬೆಳಗಾವಿಯ ಸುವರ್ಣ ವಿಧಾನ ಸೌಧದ ಕಟ್ಟಡಕ್ಕೆ ವಿಶೇಷ ವಿನ್ಯಾಸವುಳ್ಳ ಶಾಶ್ವತ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿದೆ. ಪ್ರತಿ ಶನಿವಾರ, ಭಾನುವಾರ ಹಾಗೂ ಹಬ್ಬಗಳಂದು, ವಿಶೇಷ ದಿನಗಳು, ಸರ್ಕಾರಿ ರಜಾ ದಿನಗಳಂದು ವಿದ್ಯುತ್ ದೀಪ ಬೆಳಗಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಬಣ್ಣದ ಬಣ್ಣದ ದೀಪಾಲಂಕಾರದ ಸೊಬಗು ನೆರೆದಿದ್ದವರ ಮನಸೂರೆಗೊಂಡಿತು. ತ್ರಿವರ್ಣ ಬಣ್ಣದೊಂದಿಗೆ ಎಲ್ಇಡಿ ದೀಪವನ್ನು ಸುವರ್ಣಸೌಧದ ಮೇಲೆ ಹರಿಬಿಡುವ ಮೂಲಕ ಸುವರ್ಣಸೌಧಕ್ಕೆ ವಿಶೇಷ ಕಳೆ ಬಂದಿದೆ.