ಬೆಂಗಳೂರು : ಡಿಸೆಂಬರ್ 01 : ದ್ರಶ್ಯ ನ್ಯೂಸ್ :ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಮಾಡಿರುವ ಕೃತ್ಯದ ಹಿಂದೆ ಯಾರೇ ತಪ್ಪು ಮಾಡಿದರೂ ಸರಿಯಾದ ತನಿಖೆ ಮಾಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಕರೆ ಬಂದಿರುವ ಘಟನೆ ಬಗ್ಗೆ ತನಿಖೆ ಮಾಡಿಸುತ್ತೇವೆ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ, ಅವರು ಆತಂಕದಲ್ಲಿ ಶಾಲೆಗೆ ಹೋಗುವಂತಾಗಬಾರದು, ಇಂತಹ ಸಮಾಜಘಾತುಕ ಕುಕೃತ್ಯದಲ್ಲಿ ತೊಡಗಿರುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ಈ ವಿಷಯದಲ್ಲಿ ರಾಜಿ ಮಾಡುವುದಿಲ್ಲ. ನಾವು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದರು.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, ಈ ಬಗ್ಗೆ ನಮಗೆ ಮಾಹಿತಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಶಾಲೆಗಳಿಗೆ ನಮ್ಮ ಬಾಂಬ್ ನಿಷ್ಕ್ರಿಯ ದಳ ಹೋಗಿ ತಪಾಸಣೆ ನಡೆಸಿದೆ. ಈ ಹಿಂದೆಯೂ ಸಹ ಈ ರೀತಿ ಬೆದರಿಕೆ ಕರೆ ಬಂದಿತ್ತು. ಬಹುಶಃ ಇದು ಸುಳ್ಳು ಬಾಂಬ್ ಬೆದರಿಕೆ ಅನ್ನಿಸುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಾಂಬ್ ಬೆದರಿಕೆ
ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ನಗರದ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 7 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಸದಾಶಿವನಗರದ ನೀವ್ ಅಕಾಡೆಮಿ, ಯಲಹಂಕದ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ತೆರಳಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ.
ಇಮೇಲ್ ನಲ್ಲಿ ಏನಿದೆ?
ಶಾಲೆ ಮೈದಾನದಲ್ಲಿ ಸ್ಫೋಟಕಗಳನ್ನು ಇರಿಸಿದ್ದೇವೆ. ನವೆಂಬರ್ 26ರಂದು ಅಲ್ಲಾಹನ ಮಾರ್ಗದಲ್ಲಿ ನಮ್ಮ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಹತ್ಯೆ ಮಾಡಿದ್ದಾರೆ. ಲಕ್ಷಾಂತರ ಕಾಫಿರರ ಕುತ್ತಿಗೆಗೆ ಕತ್ತಿ ಹಿಡಿಯೋದರಲ್ಲಿ ಅವರು ಶಕ್ತಿಶಾಲಿಗಳಾಗಿದ್ದಾರೆ. ಅವನು ವಿಫಲನಾಗಿ ಬೀಳುತ್ತಾನೆ. ನೂರಾರು ಮುಜಾಹಿದ್ಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಡಲು ಸಜ್ಜಾಗಿದ್ದೇವೆ. ನೀವೆಲ್ಲರೂ ಅಲ್ಲಾಹನ ಶತ್ರುಗಳು. ನಾವು ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಹತ್ಯೆ ಮಾಡುತ್ತೇವೆ. ನೀವು ನಮ್ಮ ಗುಲಾಮರಾಗದೆ ಬೇರೆ ಆಯ್ಕೆಗಳಿಲ್ಲ. ಅಲ್ಲಾಹನ ನೈಜ ಧರ್ಮವನ್ನು ಸ್ವೀಕರಿಸಿ. ದೇಗುಲಗಳು, ನಿಮ್ಮ ಮೂರ್ತಿಗಳು, ಬುದ್ಧನಿಂದ ಇನ್ಫಿನಿಟಿವರೆಗೆ ಸ್ಫೋಟಕಗಳೊಂದಿಗೆ ಅವರು ಬರುತ್ತಿದ್ದಾರೆ. ಬಿಸ್ಮಿಲ್ಲಾಹ್, ನಾವು ಇಡೀ ಭಾರತದಲ್ಲಿ ಅಲ್ಲಾಹನ ನೈಜ ಧರ್ಮವನ್ನು ಎಲ್ಲೆಡೆ ಹರಡಲಿದ್ದೇವೆ. ನಾವು ನಿಮ್ಮ ಮೇಲೆ ದಾಳಿಕೋರರನ್ನು ಕಳಿಸಿದ್ದೇವೆ
ಮುಜಾಹಿದ್ದಿನ್ ಯಾರು?
ಈ ಮುಜಾಹಿದ್ದಿನ್ ಯಾರು? ಎಲ್ಲಿಂದ ಈ ಇ-ಮೇಲ್ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದರೂ ಈ ಬಾರಿ ಮತಾಂತರಗೊಳ್ಳುವಂತೆ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಇದನ್ನು ಪೊಲಿಸರು ಗಂಭೀರವಾಗಿ ಪರಿಗಣಿಸಿದ್ದು, ಶಾಲೆಯ ಮೂಲೆ ಮೂಲೆಯಲ್ಲಿ ತಪಾಸಣೆ ಮಾಡುತ್ತಿದ್ದಾರೆ.