ಡಿಸೆಂಬರ್ 01; ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಸಂಬಂಧ ಚಿಕ್ಕಮಗಳೂರು ಪೊಲೀಸರು ಮತ್ತು ವಕೀಲರ ನಡುವೆ ತಡರಾತ್ರಿ ಹೈಡ್ರಾಮ ನಡೆದಿದೆ. ಹೆಲ್ಮೆಟ್ ಹಾಕದ ಕಾರಣ ಲಾಯರ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಠಾಣೆಯ ಮುಂದೆ ವಕೀಲರು ಪ್ರತಿಭಟನೆ ಮಾಡಿದರು.
ಅಂತಿಮವಾಗಿ 6 ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ.
ಹೆಲ್ಮೆಟ್ ಹಾಕದ ಕಾರಣಕ್ಕೆ ವಕೀಲ ಪ್ರೀತಮ್ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಕೀಲ ಪ್ರೀತಮ್ ದಂಡ ಕಟ್ಟುತ್ತೇನೆ ಎಂದು ಹೇಳಿದರೂ ಸಹ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಠಾಣೆಗೆ ಕರೆದೊಯ್ದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಹಲ್ಲೆ ಮಾಡಿದ್ದರಿಂದ ಪ್ರೀತಮ್ ಎದೆ, ಬೆನ್ನು, ಕೈಯಲ್ಲಿ ರಕ್ತದ ಕಲೆಯಾಗಿದೆ. ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಪ್ರೀತಮ್ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆ ಬಳಿ ಮತ್ತು ಠಾಣೆಯ ಮುಂದೆ ನೂರಾರು ವಕೀಲರು ಪ್ರತಿಭಟನೆ ಮಾಡಿದರು. ಹಲ್ಲೆ ಮಾಡಿದ ಸಿಬ್ಭಂದಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ವಕೀಲ ಪ್ರೀತಮ್ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿ ಬಂಧಿಸಿಲ್ಲ ಎಂದು ಆರೋಪಿಸಿ ತಡರಾತ್ರಿ 2 ಗಂಟೆಗೆ ಪೊಲೀಸ್ ಠಾಣೆ ಮುಂದೆ ವಕೀಲರು ಧರಣಿ ಕೂತರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕುಮಾರ್, ಗುರುಪ್ರಸಾದ್ ಎಂಬ ಪೊಲೀಸ್ ಸಿಬ್ಭಂದಿ ಮೇಲೆ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲು ಮಾಡಲಾಗಿದೆ.
ಶುಕ್ರವಾರ ವಕೀಲರು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ನಿರೀಕ್ಷೆ ಇದೆ. ಬೆಳಗ್ಗೆ10:30ಕ್ಕೆ ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ತುರ್ತು ಸಭೆಯನ್ನು ಕರೆದಿದೆ. ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸುವಂತೆ ವಕೀಲರು ಪಟ್ಟು ಹಿಡಿದಿದ್ದಾರೆ. ವಿವಿಧ ಜಿಲ್ಲೆಗಳಿಂದ ವಕೀಲರು ಸಭೆಗೆ ಆಗಮಿಸುತ್ತಿದ್ದಾರೆ
ತಡರಾತ್ರಿ ಘಟನೆ ಬಗ್ಗೆ ಕೈಗೊಳ್ಳಲಾದ ಕ್ರಮಗಳ ಕುರಿತು ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಹೇಳಿಕೆ ನೀಡಿದರು. “ಈ ಘಟನೆ ಸಂಬಂಧ 6 ಜನ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ,. ಪ್ರಕರಣ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಓರ್ವ ಪಿಎಸ್‌ಐ, ಓರ್ವ ಎಎಸ್‌ಐ, ಓರ್ವ ಹೆಡ್ ಕಾನ್ಸ್‌ಟೇಬಲ್, ಮೂವರು ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ” ಎಂದರು.
ವಕೀಲ ಪ್ರೀತಮ್ ನಾನು ದಂಡ ಕಟ್ಟುತ್ತೇನೆ ಎಂದು ಹೇಳಿದರೂ ಸಹ ಪೊಲೀಸ್ ಠಾಣೆಗೆ ಕರೆದದುಕೊಂಡು ಹೋಗಿದ್ದಾರೆ. ಬೈಕ್ ಕೀ ಕಿತ್ತುಕೊಂಡ ಪೊಲೀಸರನ್ನು ಪ್ರೀತಮ್ ಪ್ರಶ್ನೆ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಮುಂಜಾನೆ 3 ಗಂಟೆಯ ತನಕ ವಕೀಲರು ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಕೀಲರ ಮೇಲೆ ಹಲ್ಲೆ ಮಾಡಿವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ವಕೀಲರು ಪ್ರತಿಭಟನೆ ನಡೆಸಿ ಎಸ್ಪಿ ವಿಕ್ರಂ ಅಮಟೆ ವಿರುದ್ಧವೂ ಧಿಕ್ಕಾರ ಕೂಗಿದರು.
ಶಶಿಕುಮಾರ್, ಗುರುಪ್ರಸಾದ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಾಗಿದೆ. ಆರು ಜನರ ಮೇಲೆ ಪ್ರಕರಣ ದಾಖಲಿಸಿರುವ ವಕೀಲರು, ಇಬ್ಬರು ಪೊಲೀಸರು ಠಾಣೆಯಲ್ಲೇ ಇದ್ದರೂ ಅವರನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.