ಬೆಂಗಳೂರು : ಡಿಸೆಂಬರ್ 01: ಬೆಂಗಳೂರಿನಲ್ಲಿ 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಿಡಿಕೇಡಿಗಳು ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ.
ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಇನ್ನು ಆತಂಕಗೊಂಡ ಪೋಷಕರು ಶಾಲೆ ಬಳಿ ಓಡೋಡಿ ಬಂದು ತಮ್ಮ-ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಕಳೆದ 1 ವರ್ಷದಿಂದ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಒಂದೇ ದಿನ 30 ಶಾಲೆಗಳಿಗೆ ಇ-ಮೇಲ್ ಬೆದರಿಕೆ ಹಾಕಲಾಗಿತ್ತು. ಆದರೂ ಸಹ ಈವರೆಗೂ ಬಾಂಬ್ ಬೆದರಿಕೆ ಹಾಕಿರುವವರ ಬಂಧನವಾಗಿಲ್ಲ. ಇದೀಗ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ.
ಇನ್ನು ಈ ಬಾಂಬ್ ಬೆದರಿಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಶಾಲೆಗಳಿಗೆ ಬಾಂಬ್ ಪತ್ತೆ ದಳ, ನಿಷ್ಕ್ರಿಯ ದಳವನ್ನು ಕಳಿಸಿದ್ದೇವೆ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು