ಪುತ್ತೂರು: ನವೆಂಬರ್ 30: ದ್ರಶ್ಯ ನ್ಯೂಸ್ :ನಗರದ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಗೆ ಅಮಲು ಬೆರೆಸಿದ ಪಾನೀಯ ನೀಡಿ ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಬಿಟ್ಟು ಹೋದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಆರ್ಯಾಪು ಗ್ರಾಮದ ನಿವಾಸಿ, ಪ್ರಸ್ತುತ ಬನ್ನೂರು ಗ್ರಾಮದಲ್ಲಿ ವಾಸವಾಗಿರುವ ಸಂಶುದ್ದೀನ್ ಆಸ್ಗರ್ ಆಲಿ (23) ಬಂಧಿತ ಆರೋಪಿ. ಹಾಸನ ತಾಲೂಕಿನ ಚೆನ್ನರಾಯಪಟ್ಟಣದ ನಿವಾಸಿ ಸಂತ್ರಸ್ತೆ ಮಹಿಳೆ.
ಸಂತ್ರಸ್ತೆ ಮಹಿಳೆಯು ಆರ್ಯಾಪು ಪರಿಸರದಲ್ಲಿ ಮನೆಯೊಂದರಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿರುವ ಮಾಹಿತಿ ಇದ್ದು ತನ್ನೂರಿಗೆ ತೆರಳಿ ಪುತ್ತೂರಿಗೆ ಮರಳಿ ಬರುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ನ. 24ರಂದು ರಾತ್ರಿ ನಗರದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಅಮಲು ಬೆರೆಸಿದ ಪಾನೀಯ ನೀಡಿದ್ದಾನೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಕೃತ್ಯದ ಬಳಿಕ ಅಲ್ಲೇ ಪಕ್ಕದಲ್ಲೆ ಬಿಟ್ಟು ಹೋಗಿದ್ದ ಎಂದು ಮಹಿಳೆ ಆರೋಪಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ. 28ರಂದು ಸಂಜೆ ಪುತ್ತೂರು ಬಸ್ ನಿಲ್ದಾಣದ ಬಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.