ಬೆಂಗಳೂರು:ನವೆಂಬರ್ 30:ದ್ರಶ್ಯ ನ್ಯೂಸ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್ ಗಳನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ವೈದ್ಯರಿಗೆ ಹೃದಯಸ್ಪರ್ಷಿ ಕಿವಿಮಾತು ಹೇಳಿದರು.
ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಆ್ಯಂಬುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳ ಅಗತ್ಯವಿದೆ. ಪ್ರತೀ ತಾಲ್ಲೂಕಿನಲ್ಲಿ 4 ಆ್ಯಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಾ ಪ್ರತೀ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ವಿವರಿಸಿದರು.
ಪ್ರತೀ ಜಿಲ್ಲೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಬಹಳ ಕಷ್ಟ ಆಗುತ್ತಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾವಿರಾರು ಮಂದಿ ಬೇಡಿಕೆ ಅರ್ಜಿ ಕೊಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಆಗುತ್ತಿದೆ. ಜಯದೇವ ಆಸ್ಪತ್ರೆಯಿಂದ ಉತ್ತಮಸೇವೆ ಸಾಧ್ಯ ಆಗಿರುವಾಗ ಉಳಿದ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿ ಉತ್ತರ ಕರ್ನಾಟಕದ ಕಡೆ ಹೆಚ್ಚಿನಗಮನ ನೀಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲಹೆ ನೀಡಿದರು.
ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದರು