ಉಡುಪಿ : ನವೆಂಬರ್ 25: ದ್ರಶ್ಯ ನ್ಯೂಸ್ : ಕೃಷ್ಣ ಮಠದಲ್ಲಿ ಶುಕ್ರವಾರ (ನವೆಂಬರ್ 24) ಉತ್ಥಾನದ್ವಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ ತುಳಸೀಪೂಜೆ, ಸಂಜೆ ಕ್ಷೀರಾಬ್ದಿ ಪೂಜೆ ನಡೆದ ಬಳಿಕ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ, ವಾರ್ಷಿಕ ರಥೋತ್ಸವ ಆರಂಭಗೊಂಡಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಷ್ಟಮಠಾಧೀಶರೊಂದಿಗೆ ರಥಬೀದಿಯಲ್ಲಿ ಹಣತೆ ಹಚ್ಚಿ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ವಿದ್ಯವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ, ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಸ್ವಾಮೀಜಿ ಹಣತೆಗಳನ್ನು ಹಚ್ಚಿ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡರು.
ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಅಷ್ಠಮಠಗಳ ಯತಿಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಕ್ಷೀರಾಬ್ಧಿಯನ್ನು ನೆರವೇರಿಸಿದರು.
ಭಾಗೀರಥಿ ಜಯಂತಿಯ ಸಂದರ್ಭ ಗರ್ಭಗುಡಿ ಸೇರುವ ಕೃಷ್ಣನ ಉತ್ಸವ ಮೂರ್ತಿಯನ್ನು 177 ದಿನಗಳ ಬಳಿಕ ಉತ್ಥಾನ ದ್ವಾದಶಿಯ ದಿನವಾದ ಶುಕ್ರವಾರ ಹೊರಗೆ ತಂದು ಪೂಜೆ ಸಲ್ಲಿಸಲಾಯಿತು. ಉತ್ಸವಾದಿ ಪೂಜೆಗಳು ನಡೆದ ಬಳಿಕ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು.
ನ. 27ರವರೆಗೂ ಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ರಥೋತ್ಸವದೊಂದಿಗೆ ಲಕ್ಷ ದೀಪೋತ್ಸವ ನಡೆಯಲಿದೆ