ಮಂಗಳೂರು : ನವೆಂಬರ್ 23: ದ್ರಶ್ಯ ನ್ಯೂಸ್ :ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಜೊತೆಗೆ ಗುಂಡಿನ ಚಕಮಕಿಯಲ್ಲಿ ಕನ್ನಡಿಗ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. 28 ವರ್ಷದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಮಂಗಳೂರು ಮೂಲದವರಾಗಿದ್ದು, ಇಲ್ಲಿಯೇ ಹುಟ್ಟಿ ಬಾಲ್ಯ ಕಳೆದು ಬಳಿಕ ಸೇನೆ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಂಗಳೂರಿನಲ್ಲಿ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ. ವೆಂಕಟೇಶ್ ಮತ್ತು ಅನುರಾಧ ದಂಪತಿಯ ಏಕೈಕ ಪುತ್ರನಾಗಿರುವ ಪ್ರಾಂಜಲ್ ಮಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದಾರೆ. ಎಂಆರ್‌ಪಿಎಲ್ ಡೆಲ್ಲಿ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದು ಬಳಿಕ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್‌ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು.
ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪ್ರಾಂಜಲ್ ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್ ಮಾಡುತ್ತಿದ್ದಾರೆ. ಇದೀಗ ಯೋಧ ಪ್ರಾಂಜಲ್ ಅವರ ಸಾವು ಕುಟುಂಬಸ್ಥರನ್ನು ದಿಗ್ಭ್ರಮೆಗೊಳಿಸಿದೆ. 63 ರಾಷ್ಟ್ರೀಯ ರೈಫಲ್ಸ್ ನ ಕ್ಯಾಪ್ಟನ್ ಆಗಿರುವ ಪ್ರಾಂಜಲ್, ಬುಧವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಸೇನೆ ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ವೀರಮರಣ ಹೊಂದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪ್ರಾಂಜಲ್ ಜೊತೆಗೆ 9 ಪಿಎಆರ್‌ಎ ಕ್ಯಾಪ್ಟನ್ ಶುಭಂ, ಮತ್ತು ಹವಾಲ್ದಾರ್ ಮಜೀದ್ ಮೃತರಾಗಿದ್ದಾರೆ. ಐದರಿಂದ ಆರು ಮಂದಿ ಇರುವ ಉಗ್ರರ ಗುಂಪು ದಾಳಿ ಮಾಡಿದ್ದು ಉಗ್ರರ ಬೇಟೆಗೆ ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿದಿದೆ. ಈ ವೇಳೆ ಈ ಘಟನೆ ಸಂಭವಿಸಿದೆ.