ಸುರತ್ಕಲ್ : ನವೆಂಬರ್ 23: ದ್ರಶ್ಯ ನ್ಯೂಸ್ :ರಸ್ತೆ ಅಪಘಾತದಲ್ಲಿ ಕಾಲಿಗೆ ಸಣ್ಣ ಗಾಯಗೊಂಡಿದ್ದ ಬಾಲಕ ಕುಳಾಯಿಯ ನಿವಾಸಿ ಅರ್ಫಾನ್(16 ವ) ಎಂಬಾತ ಸುರತ್ಕಲ್ ನ ಖಾಸಗಿ ಅಥರ್ವ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೃತ ಪಟ್ಟಿದ್ದಾನೆ ಎಂದು ಕುಟುಂಬಸ್ಥರು ಹಾಗು ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ
ಮುಕ್ಕದಲ್ಲಿ ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಅಪಘಾತ ನಡೆದಿದ್ದು, ಈ ವೇಳೆ ಗಾಯಗೊಂಡಿದ್ದ ಮೊಯ್ದಿನ್ ಫರ್ಹಾನ್ ನನ್ನು ಸುರತ್ಕಲ್ ನಲ್ಲಿರುವ ಅಥರ್ವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತ ನಡೆದ ಬಳಿಕ ಬಾಲಕ ಮನೆಯವರು ಹಾಗು ಸ್ನೇಹಿತರೊಂದಿಗೆ ಮಾತನಾಡಿದ್ದಾನೆ ಎಂದು ತಿಳಿದುಬಂದಿದ್ದು, ತುರ್ತು ಶಸ್ತ್ರಚಿಕಿತ್ಸೆ ನಡೆಸಲು ಹೇಳಿದ್ದ ವೈದ್ಯಾಧಿಕಾರಿ ಶಸ್ತ್ರ ಚಿಕಿತ್ಸೆಯ ವೇಳೆ ನೀಡಿದ್ದ ಅನಸ್ತೇಶಿಯಾ ಓವರ್ ಡೋಸ್ ನೀಡಿದ ಪರಿಣಾಮ ಬಾಲಕ ಮೃತಪಟ್ಟಿರುವುದಾಗಿ ಕುಟುಂಬದವರು ಆರೋಪ ಮಾಡಿದ್ದಾರೆ. ಇಂದು ಬೆಳಗ್ಗೆ 9ಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮಧ್ಯಾಹ್ನವಾದರೂ ಎಚ್ಚರಗೊಳ್ಳದ ಬಾಲಕ ನಂತರ ಮೃತಪಟ್ಟಿರುವುದಾಗಿ ಹೇಳಲಾಗಿದ್ದು, ಶಸ್ತ್ರ ಚಿಕಿತ್ಸೆಯ ನೆಪದಲ್ಲಿ ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಸ್ಥಳಕ್ಕೆ ಸಿಪಿಐಎಂ ಮುಖಂಡರಾದ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಡಿವೈಎಫ್‌ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಕಾಂಗ್ರೆಸ್ ಮುಖಂಡ ಪುರುಷೋತ್ತಮ ಚಿತ್ರಾಪುರ ಆಗಮಿಸಿ ಆಕ್ರೋಶಿತರನ್ನು ಸಮಾಧಾನಿಸಿದರು. ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ನ್ಯಾಯ ಒದಗಿಸಲು ಆಗ್ರಹಿಸಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆಯ ಹಿನ್ನಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ತಿಮ್ಮಯ್ಯ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಮುಖಂಡರು, ಮೃತರ ಕುಟುಂಬಸ್ಥರು, ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಮುಖಂಡರ ಬೇಡಿಕೆಯಂತೆ ಪ್ರಕರಣದ ತನಿಖೆಗಾಗಿ ಖಾಸಗಿ ವೈದ್ಯರನ್ನು ಒಳಗೊಂಡ ಎಂಟು ಜನ ತಜ್ಞ ವೈದ್ಯರ ತಂಡವನ್ನು ರಚಿಸುವುದಾಗಿ ಘೋಷಿಸಿದರು. ಕಾಲಮಿತಿಯ ಒಳಗಡೆ ವರದಿ ಪಡೆದು ಕ್ರಮ ಕೈಗೊಳ್ಳುವುದು, ತಪ್ಪಿತಸ್ಥ ವೈದ್ಯರ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದರು.