ನವದೆಹಲಿ : ನವೆಂಬರ್ 22: ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ತಮ್ಮ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ತಪ್ಪು ಹಾಗೂ ಸುಳ್ಳು ಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸುವ ಜಾಹಿರಾತು ನೀಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಯೋಗ ಗುರು ರಾಮ್ ದೇವ್ ಒಡೆತನದ ಪತಾಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿ ಅಹಸಾಸುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಜನರ ದಿಕ್ಕು ತಪ್ಪಿಸಲು ಸುಳ್ಳು ಹಾಗೂ ತಪ್ಪು ಮಾಹಿತಿಯ ಜಾಹಿರಾತುಗಳನ್ನು ಕೂಡಲೇ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಬಾಬಾ ರಾಮ್ ದೇವ್ ನೇತೃತ್ವದ ಕಂಪನಿ ತನ್ನ ಜಾಹಿರಾತುಗಳಲ್ಲಿ ಕೊರೊನಾ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ವಿರುದ್ಧ ಅಪಪ್ರಚಾರ ತಡೆಯಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಪತಾಂಜಲಿಯ ಜಾಹಿರಾತು ಕೂಡಲೇ ನಿಲ್ಲಿಸದೇ ಇದ್ದರೆ ಪ್ರತಿ ಉತ್ಪನ್ನದ ಮೇಲೆ ತಲಾ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.