ಪುತ್ತೂರು: ನವೆಂಬರ್ : 07: ದೃಶ್ಯ ನ್ಯೂಸ್ : ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕಡಿದು ಬರ್ಬರ ಹತ್ಯೆ ಮಾಡಲಾಗಿದೆ.
ಅಕ್ಷಯ್ ಕಲ್ಲೇಗ ಪುತ್ತೂರಿನಲ್ಲಿ ಇದ್ದಾಗ ಆಗಮಿಸಿದ ತಂಡಯೊಂದು ಯದ್ವಾತದ್ವ ತಲವಾರ್‌ನಲ್ಲಿ ದಾಳಿ ನಡೆಸಿ, ಬರ್ಬರ ಹತ್ಯೆ ಮಾಡಿದೆ.
ಅಕ್ಷಯ್ ವಿವೇಕಾನಂದ ಕಾಲೇಜ್ ಬಳಿ ನಿವಾಸಿಯಾಗಿದ್ದು, ತಂದೆ ಚಂದ್ರಶೇಖರ, ತಾಯಿ ಕುಸುಮ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಕಳೆದ 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಎಂಬ ಹುಲಿ ವೇಷ ತಂಡವನ್ನು ಅವರು ಮುನ್ನಡೆಸುತ್ತಿದ್ದರು. ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದುವೇ ಸೇಡಾಗಿ ಪರಿಣಮಿಸಿದ ಕಾರಣ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಹೇಳಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ಸ್ವಲ್ಪ ದೂರದಲ್ಲಿರುವ ಕೆನಾರ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್ ಮೇಲೆ ತಂಡ ದಾಳಿ ನಡೆಸಿದ್ದು, ಅಲ್ಲಿಂದ ಆತನನ್ನು ಬೆನ್ನಟ್ಟಿಕೊಂಡು ಬಂದು ತಲವಾರಿನಿಂದ ದಾಳಿ ನಡೆಸಿದ್ದಾರೆ.
ಎಟಿಎಂಬಳಿಯಿಂದ ಮಾಣಿ ಮೈಸೂರು ಹೆದ್ದಾರಿಯನ್ನು ದಾಟಿ ಇನ್ನೊಂದು ಬದಿಯಲ್ಲಿ ಗಿಡ ಮರಗಳಿಂದ ತುಂಬಿದ್ದ ಜಾಗದವರೆಗೂ ಬೆನ್ನಟ್ಟಿ ಹೋಗಿ ಹತ್ಯೆ ನಡೆಸಿರುವುದು ಕಂಡು ಬಂದಿದೆ. ಈ ಕೃತ್ಯವು ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ.ಇನ್ನು ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದಾರೆ. ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಡಿವೈಎಸ್ಪಿ ಸಹಿತ ಪೊಲೀಸರು ಭೇಟಿ ನೀಡಿದ್ದು, ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ. ಮೃತ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.