ಉಡುಪಿ :ನವೆಂಬರ್ 04: ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಉಡುಪಿ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ 14ರ ವಯೋಮಾನದ ಶಾಲಾ ಬಾಲಕ- ಬಾಲಕಿಯರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ಒಟ್ಟಾರೆಯಾಗಿ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡವು.
ದಕ್ಷಿಣ ಕನ್ನಡದ ಅಫೀಟ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಕೂಟದಲ್ಲಿ ಒಟ್ಟು ನಾಲ್ಕು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದು 28 ಅಂಕಗಳನ್ನು ಸಂಗ್ರಹಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡರು.
ಕ್ರೀಡಾಕೂಟದ ಬಾಲಕರ ವಿಭಾಗದ ತಂಡ ಪ್ರಶಸ್ತಿ 20 ಅಂಕಗಳನ್ನು ಸಂಗ್ರಹಿಸಿದ ಬಳ್ಳಾರಿ ತಂಡದ ಪಾಲಾದರೆ, ಬಾಲಕಿಯರ ವಿಭಾಗದ ತಂಡ ಪ್ರಶಸ್ತಿ 19 ಅಂಕಗಳೊಂದಿಗೆ ಅಗ್ರಸ್ಥಾನಿಯಾದ ಬೆಂಗಳೂರಿನ ವಿದ್ಯಾಸಾಗರ ಸ್ಪೋರ್ಟ್ಸ್ ಸ್ಕೂಲ್‌ನ ಪಾಲಾಯಿತು.
ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಆಗಿ ರಾಯಚೂರು ತಂಡದ ದುರ್ಗೇಶ್ ಆಯ್ಕೆಯಾದರು. ಇವರು ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಪಡೆದಿದ್ದರೆ, ಬಾಲಕಿಯರ ವಿಭಾಗದ ಅತ್ಯುತ್ತಮ ಕ್ರೀಡಾಪಟುವಾಗಿ ಬೆಳಗಾವಿ ಜಿಲ್ಲೆಯ ಗೌರಿ ಪೂಜಾರಿ ಆಯ್ಕೆಯಾದರು. ಇವರು 600ಮೀ. ಓಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು
ಸಂಜೆ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಡಿಡಿಪಿಐ ಗಣಪತಿ ಕೆ. ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ತೋಟದಮನೆ ಶ್ರೀ ಶಿರಡಿ ಸಾಯಿಬಾಬ ಮಂದಿರದ ಮೊತ್ತೇಸರ ದಿವಾಕ ಶೆಟ್ಟಿ, ಕನ್ನರ್ಪಾಡಿ ಶ್ರೀ ಜಯದುರ್ಗಾ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಭಟ್, ಗಣ್ಯರಾದ ಪುರುಷೋತ್ತಮ್ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಜಯಪ್ರಕಾಶ್ ಕೆದ್ಲಾಯ, ಸುಧೀರ್‌ಕುಮಾರ್ ಶೆಟ್ಟಿ, ಅನಿಲ್ ಲೋಬೊ, ರಮೇಶ್ ಕಾಂಚನ್ ಮತ್ತು ಸೈಂಟ್ ಸಿಸಿಲಿ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ತೆರೇಸಾ ಜ್ಯೋತಿ, ಸೈಂಟ್ ಸಿಸಿಲಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪ್ರೀತಿ ಜೆ. ಕ್ರಾಸ್ತಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ತಾಲೂಕು ಅಧ್ಯಕ್ಷ
ಚಂದ್ರಶೇಖರ್ ಸುವರ್ಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ನಗರಸಭೆ ಪೌರಾಯುಕ್ತ ರಾಯಪ್ಪ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್‌ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.