ಬೆಳ್ತಂಗಡಿ: ವಿವಾಹಿತ ಮಹಿಳೆಯ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮಾಚಾರಿನ ಕೆಂಚನೊಟ್ಟು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಾಲು ಗ್ರಾಮದ ಮಾಚಾರು ಕೆಂಪನೊಟ್ಟು ನಿವಾಸಿ ಶಶಿಕಲಾ (27) ಮೃತಪಟ್ಟವರು. ಶಶಿಕಲಾ ಪತಿ ಸುಧಾಕರ ನಾಯ್ಕ (30).
ಮೃತ ಶಶಿಕಲಾ ಮತ್ತು ಪತಿ ಸುಧಾಕರ್ ನಾಯ್ಕ ಸಂಬಂಧಿಕರಾಗಿದ್ದು, ಪರಸ್ಪರ ಪ್ರೀತಿಸಿ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ ಸುಧಾಕರ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ಇಬ್ಬರೂ ಮಾಚಾರು ಕೆಂಪನೊಟ್ಟು ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ದಂಪತಿಗೆ 6 ವರ್ಷದ ಪುತ್ರಿ ಇದ್ದು, ಆಕೆ ಅಜ್ಜಿ ಮನೆಗೆ ತೆರಳಿದ್ದಳು. ಗುರುವಾರ ರಾತ್ರಿ ಪತಿ, ಪತ್ನಿ ಮಾತ್ರ ಮನೆಯಲ್ಲಿದ್ದರು. ಶುಕ್ರವಾರ ಬೆಳಗ್ಗೆ ಪತಿ ಸುಧಾಕರ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿ ಬೇಗ ಮನೆಗೆ ಹಿಂದಿರುಗಿದ್ದ. ಈ ವೇಳೆ ಶಶಿಕಲಾ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ ಎಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ತೋರಟ್, ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ಮತ್ತು ಇತರ ಅಧಿಕಾರಿ ಹಾಗೂ ಸಿಬಂದಿ ಆಗಮಿಸಿದ್ದರು. ಮೃತದೇಹವನ್ನು ಸ್ಥಳೀಯ ಶೌರ್ಯ ವಿಪತ್ತು ನಿರ್ವಹಣ ಘಟಕದವರ ಸಹಕಾರದಿಂದ ಬಾವಿಯಿಂದ ಮೇಲಕ್ಕೆತ್ತಲಾಯಿತು. ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕಂಡು ಬಂದಿದ್ದರೂ, ಸ್ಥಳದಲ್ಲಿ ಬಾವಿಗೆ ಹೋಗುವ ಹಾದಿಯಲ್ಲಿ ಎಳೆದೊಯ್ದಂತೆ ಗುರುತುಗಳು ಕಂಡು ಬಂದಿವೆ. ಅಲ್ಲದೆ ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಶುಕ್ರವಾರ ಆಕೆಯ ಸಾವಿನ ಮೊದಲು ಪತಿ, ಪತ್ನಿ ಮಧ್ಯೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಹಾಗಾಗಿ ಇದೊಂದು ಕೊಲೆ ಪ್ರಕರಣ ಆಗಿರಬಹುದೇನೋ ಎಂಬ ಅನುಮಾನ ವ್ಯಕ್ತವಾಗಿದ್ದರಿಂದ ಪತಿ ಸುಧಾಕರ ನಾಯ್ಕನನ್ನು ಧರ್ಮ ಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.