ಮಣಿಪಾಲ 03 ನವೆಂಬರ್ 2023: ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಚಿಕಿತ್ಸೆ ನೀಡಿದರೆ ಮಕ್ಕಳ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ 2023ರ ಫೆಬ್ರವರಿ 12 ರಂದು ಆಯೋಜನೆಗೊಂಡ ಮಣಿಪಾಲ್ ಮ್ಯಾರಥಾನ್-2023, ‘ಸಾಕಷ್ಟು ಮೊದಲೇ ರೋಗ ಪತ್ತೆ; ಪ್ರಾಣ ಉಳಿಸಬಹುದು ಮತ್ತೆ! ನಾನು ಬದುಕುಳಿಯುವೆ’ ಎಂಬ ಬಾಲ್ಯದ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಜಾಗೃತಿ ಆಶಯವನ್ನು ಹೊಂದಿತ್ತು. ಈ ಮ್ಯಾರಥಾನ್ ನಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳ, ದೇಶಗಳ ಸುಮಾರು 11,000 ಮಂದಿ ಭಾಗವಹಿಸಿದ್ದರು.
ರೋಟರಿ ಕ್ಲಬ್ ಮಣಿಪಾಲ ಟೌನ್, ಮಣಿಪಾಲ್ ಮ್ಯಾರಥಾನ್ 2023 ಆಯೋಜನೆಯ ಬಳಗದೊಂದಿಗೆ ಕೈಜೋಡಿಸಿತ್ತು ಮತ್ತು ಕ್ಯಾನ್ಸರ್ ಪೀಡಿತ ಬಡಮಕ್ಕಳಿಗಾಗಿ ನಿಧಿ ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ರೋಟರಿ ಕ್ಲಬ್ ಮಣಿಪಾಲ ಟೌನ್ ಸಂಗ್ರಹದಷ್ಟೇ ಮೊತ್ತವನ್ನು ನೀಡಿ ಮತ್ತು ಪ್ರಸ್ತುತ ಇರುವ ದತ್ತಿನಿಧಿಗೆ ಸೇರಿಸಲು ಸಮ್ಮತಿಸಿತ್ತು. ಈ ನಿಧಿಯಿಂದ ಬರುವ ಬಡ್ಡಿಯನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕಾಲಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ,
ಇತ್ತೀಚೆಗೆ ಜರುಗಿದ ನಿಧಿ ಹಸ್ತಾಂತರ ಕಾರ್ಯಕ್ರಮದಲ್ಲಿ ಸಂಗ್ರಹಿಸಿದ ಗಣನೀಯವಾದ ಮೊತ್ತವನ್ನು ಮಕ್ಕಳ ರಕ್ತವಿಜ್ಞಾನ ಮತ್ತು ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ. ಅವರಿಗೆ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ನ ಸಹಕುಲಾಧಿಪತಿ ಡಾ. ಎಚ್. ಎಸ್ ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ [ಡಾ.] ಎಂ. ಡಿ. ವೆಂಕಟೇಶ್ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ ಶರತ್ ಕುಮಾರ್ ರಾವ್ ಅವರು ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ ಬಲ್ಲಾಳ್ ಅವರು, ‘ಇಂದಿನ ಮಕ್ಕಳೇ ನಮ್ಮ ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಈ ನಿಟ್ಟಿನಲ್ಲಿ ಮಾಹೆ ವಿಶ್ವವಿದ್ಯಾನಿಲಯ, ನಮ್ಮ ಬಳಗದ ವೈದ್ಯಕೀಯ ಕಾಲೇಜು ಮತ್ತು ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗವು ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಮತ್ತು ಚಿಕಿತ್ಸೆಯಿಂದ ವಂಚಿತರಾಗದಂತೆ ಕಾಳಜಿ ವಹಿಸುವುದರಲ್ಲಿ ಬದ್ಧವಾಗಿವೆ’ ಎಂದರು.
ಡಾ. ವೆಂಕಟೇಶ್ ಅವರು ಮಾತನಾಡಿ, ‘ಬಾಲ್ಯದ ಕ್ಯಾನ್ಸರ್ ಅನ್ನು ಪೂರ್ಣವಾಗಿ ಗುಣಪಡಿಸಬಹುದು. ಮಕ್ಕಳು ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುವ ಸಾಧ್ಯತೆ ಅಧಿಕವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಮಣಿಪಾಲ ಆರೋಗ್ಯ ವಿಜ್ಞಾನ ಸಂಸ್ಥೆಗಳ ಬಳಗವು ಈ ಅರಿವನ್ನು ಮೂಡಿಸುವುದರಲ್ಲಿ ಕ್ರಿಯಾಶೀಲವಾಗಿದೆ’ ಎಂದರು.
ಡಾ. ಶರತ್ ರಾವ್ ಅವರು ಮಾತನಾಡಿ, ‘ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ರಕ್ತವಿಜ್ಞಾನ ಮತ್ತು ಆಂಕಾಲಜಿ ವಿಭಾಗವು ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಮಕ್ಕಳ ಸಮಗ್ರ ಆರೈಕೆಯ ಅಗತ್ಯವನ್ನು ಅರಿತು ಕಾರ್ಯನಿರ್ವಹಿಸುತ್ತಿದೆ’ ಎಂದರು.
ರೋಟರಿ ಕ್ಲಬ್ ಮಣಿಪಾಲ ಟೌನ್ ಪರವಾಗಿ ರೊಟೇರಿಯನ್ ಶ್ರೀಧರ್ ಮತ್ತು ರೊಟೇರಿಯನ್ ಹಿಲ್ಡಾ ಲೀವಿಸ್ ಉಪಸ್ಥಿತರಿದ್ದು, ‘ ರೋಟರಿ ಕ್ಲಬ್ ಕಾಯಿಲೆ ಪೀಡಿತರಿಗಾಗಿ ನಿಧಿಯನ್ನು ಸಂಗ್ರಹಿಸುವುದಷ್ಟೇ ಅಲ್ಲ, ಚಿಕಿತ್ಸ ದಾಖಲಾಗುವ ಮಕ್ಕಳ ಆರೈಕೆಯನ್ನು ಸುಧಾರಿಸುವುದಕ್ಕಾಗಿ ಉಪಕರಣಗಳನ್ನು ಒದಗಿಸುವಲ್ಲಿಯೂ ಸಕ್ರಿಯವಾಗಿದೆ’ ಎಂದರು.
ಡಾ. ವಾಸುದೇವ ಭಟ್ ಕೆ. ಅವರು ಮಾತನಾಡಿ, ‘ಈ ನಿಟ್ಟಿನಲ್ಲಿ ಸಹಕರಿಸುತ್ತಿರುವ ಎಲ್ಲರ ಸಮೂಹ ಪ್ರಯತ್ನದಿಂದಾಗಿ ಮಕ್ಕಳು ಚಿಕಿತ್ಸೆಯಿಂದ ವಂಚಿತರಾಗುವ ಸಾಧ್ಯತೆ ಕಡಿಮೆಯಾಗುತ್ತಿದೆ ಮತ್ತು ಕ್ಯಾನ್ಸರ್ ಪೀಡಿತವಾದ ಒಂದೇ ಒಂದು ಮಗು ಹಣವಿಲ್ಲದ ಕಾರಣದಿಂದ ಚಿಕಿತ್ಸೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗಿದೆ’ ಎಂದರು.
ಮಾಹೆಯ ಕ್ರೀಡಾ ವಿಭಾಗದ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ಅವರು, ‘ಮಣಿಪಾಲ್ ಮ್ಯಾರಥಾನ್-2023 ರಲ್ಲಿ ಮಾಹೆಯ ಎಲ್ಲಾ ಕ್ಯಾಂಪಸ್ ಗಳಿಂದ ಮತ್ತು ದೇಶದ ಹಾಗೂ ಜಗತ್ತಿನ ಬೇರೆ ಬೇರೆ ಕಡೆಗಳಿಂದ ಎಲ್ಲ ವಯೋಮಾನದವರು ಭಾಗವಹಿಸಿದ್ದಾರೆ. ಸಾರ್ಥಕ ಉದ್ದೇಶಕ್ಕಾಗಿ ಕೊಡುಗೆ ನೀಡಿದ ಎಲ್ಲ ದಾನಿಗಳನ್ನು ಅದರಲ್ಲೂ ವಿಶೇಷವಾಗಿ ರೋಟರಿ ಕ್ಲಬ್ ಮಣಿಪಾಲ ಟೌನ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.