ಮಣಿಪಾಲ, 03 ನವೆಂಬರ್ 2023: ಫೊಟೊಮಾಡ್ಯುಲೇಶನ್ ಥೆರಪಿ [ಪಿಬಿಎಂ] ಕ್ಷೇತ್ರದ ಮಹತ್ತ್ವಪೂರ್ಣ ಸಾಧನೆಗಾಗಿ ಫೊಟೊಮಾಡ್ಯುಲೇಶನ್ ಥೆರಪಿಯ ಜಾಗತಿಕ ಸಂಘಟನೆ [ಡಬ್ಲ್ಯುಎಎಲ್ಟಿ]ಯು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ಇದರ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಶ್ರೇಷ್ಠ ಸಂಸ್ಥೆಯಾಗಿ ಮಾನ್ಯ ಮಾಡಿದೆ.
ಡಬ್ಲ್ಯುಎಎಲ್ಟಿ (ವಾಲ್ಟ್] ಯ ಸದಸ್ಯ ನಿರ್ದೇಶಕ ಡಾ. ಜಿ. ಅರುಣ್ ಮಯ್ಯ, ಈ ಕ್ಷೇತ್ರದ ಮುಂಚೂಣಿ ಸಾಧಕರಾಗಿದ್ದು ಜಾಗತಿಕ ಮಾನ್ಯತೆಯನ್ನು ದೊರಕಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಡಾ. ಮಯ್ಯ ಅವರ ಸಹಭಾಗಿತ್ವದ ಸಂಶೋಧನೆ, ವಿಪುಲ ಪ್ರಕಟಣೆ, ವೈಜ್ಞಾನಿಕ ಸಂವಾದಗಳಿಗೆ ನೀಡಲಾದ ಮಹತ್ತ್ವದ ಕೊಡುಗೆಗಳು, ನೋವಿನ ನಿಭಾವಣೆ ಮತ್ತು ಕಾಯಿಲೆಯ ಸ್ಥಿತಿಗನುಗುಣವಾಗಿ ಅಂಗಾಂಶ ಚಿಕಿತ್ಸೆಗೆ ಸಂಬಂಧಿಸಿದ ಫೊಟೊಮಾಡ್ಯುಲೇಶನ್ ಥೆರಪಿಯಲ್ಲಿ ವಿಶೇಷ ಸುಧಾರಣೆಯನ್ನು ದಾಖಲಿಸಿವೆ.
ಭಾರತವು ಆರೋಗ್ಯ ಪಾಲನೆ ಮತ್ತು ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಆಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಸಂಸ್ಥೆಯು ಶಿಕ್ಷಣ ಮತ್ತು ಸಂಶೋಧನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. 2021-24 ಸಾಲಿನ ಡಬ್ಲ್ಯುಎಎಲ್ಟಿಯ ಅಧ್ಯಕ್ಷರಾಗಿರುವ ಪಿಆರ್. ಆರ್ಜೆ. ಬೆನ್ಸಾಡೌನ್ ಅವರು ಮಾಹೆಯ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರ [ಪೋಡಿಯಾಟ್ರಿ ಮತ್ತು ಡಯಬಿಟಿಕ್ ಫೂಟ್ ಕೇರ್ ಸೆಂಟರ್] ವನ್ನು ಶ್ರೇಷ್ಠ ಫೊಟೊಮಾಡ್ಯುಲೇಶನ್ ಥೆರಪಿಯ ಕೇಂದ್ರವಾಗಿ ಅನುಮೋದಿಸಿದ್ದಾರೆ ಮತ್ತು ಡಾ. ಜಿ. ಅರುಣ್ ಮಯ್ಯ ಅವರನ್ನು ವಿಶೇಷ ಸಾಧನೆಗಾಗಿ ಅಭಿನಂದಿಸಿದ್ದಾರೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹ ಕುಲಾಧಿಪತಿ ಡಾ. ಎಚ್. ಎಸ್, ಬಲ್ಲಾಳ್ ಅವರು, ಜಾಗತಿಕ ಮನ್ನಣೆ ಪಡೆದಿರುವ ಪಾದಚಿಕಿತ್ಸೆ ಹಾಗೂ ಡಯಬಿಟಿಕ್ ಪಾದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಅಭಿನಂದಿಸುತ್ತ, “ಪ್ರಸ್ತುತ ಲಭಿಸಿರುವ ಜಾಗತಿಕ ಮಾನ್ಯತೆಯು ಸಾಮಾಜಿಕ ಸ್ವಾಸ್ಥ್ಯಪಾಲನೆಯಲ್ಲಿ ಸಂಸ್ಥೆಯ ಬದ್ಧತೆ ಮತ್ತು ಪ್ರಾಧ್ಯಾಪಕರ ನಿರಂತರ ಸಂಶೋಧನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ” ಎಂದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್ ಅವರು, ಡಾ. ಜಿ. ಅರುಣ್ ಮಯ್ಯ ಅವರನ್ನು ಅಭಿನಂದಿಸುತ್ತ, ‘”ಕರ್ತವ್ಯದ ಬದ್ಧತೆಯಿಂದಾಗಿ ಜಾಗತಿಕ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿದೆ.
ಮಾಹೆ ಘಟಕಕ್ಕೆ ದೊರೆತಿರುವ ಜಾಗತಿಕ ಮಾನ್ಯತೆಯು ಮುಂದೆ ಸಮಾಜದ ಆರೋಗ್ಯಪಾಲನೆಯ ಕಾರ್ಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಲು ದೊರೆತ ಪ್ರೋತ್ಸಾಹವಾಗಿದೆ” ಎಂದರು.
ಮಾಹೆಯಲ್ಲಿರುವ ಪಾದಚಿಕಿತ್ಸೆ ಮತ್ತು ಮಧುಮೇಹ ಪಾದ ಆರೈಕೆ ಮತ್ತು ಸಂಶೋಧನ ಕೇಂದ್ರವು ಫೊಟೊಮಾಡ್ಯುಲೇಶನ್ ಥೆರಪಿ [ಪಿಬಿಎಂ] ಕ್ಷೇತ್ರದ ಉತ್ಕೃಷ್ಟ ಸಂಸ್ಥೆಯಾಗಿ ಅಂತಾರಾಷ್ಟ್ರೀಯವಾಗಿ ಮಾನ್ಯವಾಗಿರುವುದು ಇದರ ಸಾಧನೆಗೆ ಪ್ರಮುಖ ಮೈಲಿಗಲ್ಲಾಗಿದೆ. ಭಾರತದಲ್ಲಿ ಆರೋಗ್ಯಪಾಲನೆ ಮತ್ತು ಸಂಶೋಧನ ಕ್ಷೇತ್ರಕ್ಕೆ ವಿಶೇಷ ಆದ್ಯತೆ ಇರುವುದನ್ನು ಇದು ದೃಢಪಡಿಸುತ್ತದೆ.