ಉಡುಪಿ: ನವೆಂಬರ್ 03: ಈ ಬಾರಿಯ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ 11 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು ಕೇವಲ 1022 ಅಭ್ಯರ್ಥಿಗಳು ಮಾತ್ರ ಆಯ್ಕೆಗೊಂಡಿದ್ದಾರೆ.
ಅದೆಷ್ಟೋ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಲ್ಲಿ ಪಾಸ್ ಆಗುವುದು ಕನಸಾಗಿ ಉಳಿದಿರುತ್ತದೆ, ಸಾಧಿಸುವ ಮನಸಿದ್ದರೆ ಸಾಧಿಸಬೇಕೆಂಬ ಛಲ ಇದ್ದರೆ ಏನೆನ್ನಾದರೂ ಸಾಧಿಸಬಹುದು ಎಂಬುದನ್ನು ಮೂರು ವರ್ಷದ ಮಗುವಿನ ತಾಯಿ ಉಡುಪಿಯ ನಿವೇದಿತಾ ಶೆಟ್ಟಿ ತೋರಿಸಿಕೊಟ್ಟಿದ್ದಾರೆ.
ನಿವೇದಿತಾ ಮೂಲತ ಉಡುಪಿಯಯವರು. ಇವರ ತಂದೆ ಸದಾನಂದ ಶೆಟ್ಟಿ ಮತ್ತು ತಾಯಿ ಸಮಿತ ಶೆಟ್ಟಿ ಉಡುಪಿಯಲ್ಲಿ ವಾಸವಾಗಿದ್ದಾರೆ. ನಿವೇದಿತಾ ಅವರ ಪತಿ ದಿವಾಕರ ಶೆಟ್ಟಿ, ಓಮನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ . ನಿವೇದಿತಾ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ತಮ್ಮ ಪ್ರೈಮರಿ ವಿದ್ಯಾಭ್ಯಾಸವನ್ನು ಮಿಲಾಗ್ರಿಸ್ ಶಾಲೆ ಉಡುಪಿಯಲ್ಲಿ ಮುಗಿಸಿ ನಂತರ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ಇವರು ಕೊನೆಯ ವರ್ಷದ ಇಂಜಿನಿಯರಿಂಗ್ ನಲ್ಲಿ ಇರುವಾಗಲೇ ಕ್ಯಾಂಪಸ್ ರಿಕ್ರೂಟ್ಮೆಂಟ್ನಲ್ಲಿ ಒಳ್ಳೆಯ ಕಂಪನಿಯಲ್ಲಿ ಆಯ್ಕೆಗೊಂಡಿದ್ದರು. ಆದರೆ ನಾಗರಿಕ ಸೇವಾ ಪರೀಕ್ಷೆ ಬರೆಬೇಕೆಂಬ ಆಸಕ್ತಿ ಮೊದಲಿನಿಂದಲೂ ಇವರಿಗೆ ಇತ್ತು.
ಆರಂಭದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು . ತಮ್ಮ ಬಿಡುವಿನ ಸಮಯವನ್ನು ಯುಪಿಎಸ್ಸಿ ಪರೀಕ್ಷೆ ತಯಾರಿಗೆ ಬಳಸುತ್ತಿದ್ದರು.
ನಂತರ ತಮ್ಮ ಉದ್ಯೋಗವನ್ನು ಬಿಟ್ಟು ಎಲ್ಲ ಸಮಯವನ್ನು ಯುಪಿಎಸ್ಸಿ ಪರೀಕ್ಷೆ ತಯಾರಿಯಲ್ಲಿ ಬಳಸಿ ಸತತ ಪ್ರಯತ್ನದಿಂದ ಯಾವುದೇ ಕೋಚಿಂಗ್ ಪಡೆಯದೆ 2022ರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.