ಉಡುಪಿ : ನವೆಂಬರ್ 01: ಕುಂಜಿಬೆಟ್ಟು ಅದಿತಿ ಗ್ಯಾಲರಿಯಲ್ಲಿ ವಸಂತ ಕಲಾ ಚಿತ್ರಕಲಾ ಪ್ರದರ್ಶನ ಉದ್ಘಾಟನೆಗೊಂಡಿತು,ಕಲಾವಿದ ಯು.ರಮೇಶ ರಾವ್, ಕಲಾವಿದೆ ಶರ್ಮಿಳಾ ಗುಪ್ತೆ ಪ್ರದರ್ಶನ ಉದ್ಘಾಟಿಸಿದರು .
ಬದುಕೆಂಬುದನ್ನು ಕಲೆಯಾಗಿ ತಿಳಿದು, ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ (1960-2022). ಕಾಲೇಜು ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿದ ಇವರು ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯಾಡಿಸಿದರು.
ಖ್ಯಾತ ಸಂಗೀತ ಕಲಾವಿದೆ ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (2013) ವಸಂತಲಕ್ಷ್ಮೀ ಯವರು ದುಃಖದ ಮಡುವಿನಿಂದ ಮರೆಯಾಗಲು ಸಾಧನವಾಗಿ ಆಯ್ದುಕೊಂಡದ್ದು ಚಿತ್ರಕಲೆ. ಆಯಿಲ್, ಅಕ್ರಿಲಿಕ್, ಪೆನ್ಸಿಲ್ ಡ್ರಾಯಿಂಗ್ ಮಾಧ್ಯಮಗಳನ್ನು ಬ್ರಷ್- ನೈಫ್ – ಸ್ಕ್ಯಾಲ್ಪೆಲ್ ಸಾಧನಗಳನ್ನು ಬಳಸಿ ಪೋರ್ಟ್ರೇಟ್, ಲ್ಯಾಂಡ್ ಸ್ಕೇಪ್, ಸ್ಥಿರ ಚಿತ್ರ, ಅಮೂರ್ತ ಶೈಲಿಯ ಹಲವಾರು ಕೃತಿಗಳನ್ನು ತನ್ನಷ್ಟಕ್ಕೆ ತಾನೇ ಹೆಣೆಯುತ್ತಾ ಬಂದರು.
ಉಡುಪಿಯ ದೃಶ್ಯ ಕಲಾ ಶಾಲೆಯ ಹಿರಿಯ ಶಿಕ್ಷಕ ರಮೇಶ ರಾಯರಲ್ಲಿ ಮಾರ್ಗದರ್ಶನ ಪಡೆದು, ಮುಂದೆ ಮುಂಬೈ ಯ ಶ್ರೀಮತಿ ಶರ್ಮಿಳಾ ಗುಪ್ತೆ ಯವರಲ್ಲಿ ವಿದ್ಯುಕ್ತ ಕಲಾ ತರಬೇತಿಯನ್ನು ತನ್ನ 57 ರ ವಯಸ್ಸಿನಲ್ಲಿ ಪಡೆದ ಸಾಧನೆ ಇವರದು.
ವಸಂತಲಕ್ಷ್ಮೀ ಯವರು ಅಕಾಲಿಕವಾಗಿ ನಿಧನರಾದ ಒಂದು ವರ್ಷದಲ್ಲೇ ಅವರ ಚಿತ್ರ ಕಲಾ ನೈಪುಣ್ಯವನ್ನು ಸಾರುವ “ವಸಂತ ಕಲಾ” ಎಂಬ ಈ ಚಿತ್ರಕಲಾ ಪ್ರದರ್ಶನವು ಅವರಿಗೆ ಸಲ್ಲಿಸುವ ವಿನಯ ಪೂರ್ವಕ ಶ್ರದ್ಧಾಂಜಲಿಯೇ ಆಗಿದೆ.
ಸುಮಾರು 70 ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ.ವಸಂತ ಕಲಾ ಚಿತ್ರಕಲಾ ಪ್ರದರ್ಶನವು ಉಡುಪಿ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ನವೆಂಬರ್ 1 ರಂದು ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ.
ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ | ಕಿರಣ್ ಆಚಾರ್ಯ ಸ್ವಾಗತಿಸಿ ರಾಜಮೋಹನ್ ವಾರಂಬಳ್ಳಿ ವಂದಿಸಿದರು. ರಂಜನಿ ಮೆಮೋರಿಯಲ್ ಟ್ರಸ್ಟ್ ನ ಅರವಿಂದ ಹೆಬ್ಬಾರ್ ಪ್ರಸ್ತಾವಿಸಿದರು. ಶಿಷ್ಯೆಯರಾದ ಸಮನ್ವಿ, ಅರ್ಚನಾ ಹಾಗೂ ಗಾರ್ಗಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು . ಉದ್ಘಾಟನಾ ಸಮಾರಂಭದ ಬಳಿಕ ಕಲಾವಿದೆ ವಸಂತಲಕ್ಷ್ಮೀ ಅವರ ಕುರಿತಾಗಿ ನಿರ್ಮಿಸಲಾದ ವಿಡಿಯೋ ಪ್ರದರ್ಶನ ಜರಗಿತು.