ಮಣಿಪಾಲ, 01 ನವೆಂಬರ್ 2023:ದ್ರಶ್ಯ ನ್ಯೂಸ್ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಮಣಿಪಾಲ ಕ್ಯಾಂಪಸ್ ನಲ್ಲಿ 2023 ರ ಅಕ್ಟೋಬರ್ 28 ರಂದು ಇಂಟರಾಕ್ಟ್ ಹಾಲ್‌ನಲ್ಲಿ ಗಂಗಾ ಆಕ್ಟಿವಿಟಿ ಕ್ಲಬ್ ಮತ್ತು ಗಂಗಾ ಯೂತ್ ಸಂಸತ್ತಿನ ಉದ್ಘಾಟನೆಯೊಂದಿಗೆ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಈ ಮಹತ್ವದ ಸಂದರ್ಭವು ಪ್ರದೇಶದೊಳಗೆ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ.
ಎಂ ಐ ಟಿ ನಿರ್ದೇಶಕರಾದ ಕಮಾಂಡರ್ ಡಾ. ಅನಿಲ್ ರಾಣ ಅವರು ಸ್ವಾಗತ ಭಾಷಣ ಮಾಡುತ್ತ ರಾಷ್ಟ್ರೀಯ ಉಪಕ್ರಮವಾದ ‘ಮಿಶನ್ ಅಮೃತ್ ಸರೋವರ್’ಗೆ ಮಣಿಪಾಲ ಎಂಐಟಿಯ ಸುದೀರ್ಘ ಕಾಲದ ಬದ್ಧತೆಯನ್ನು ನೆನಪಿಸಿಕೊಂಡರು. ಮಾಹೆಯ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಗಂಗಾ ಆ್ಯಕ್ಟಿವಿಟಿ ಕ್ಲಬ್‌ನ ಗುರಿಗಳನ್ನು ಅನಾವರಣಗೊಳಿಸಿದರು. ಈ ಸಂಘಗಳು ಶುದ್ಧ ನೀರು ಮತ್ತು ನೈರ್ಮಲ್ಯದ ಕಡೆಗೆ ಗಮನಹರಿಸಲಿವೆ , ನದಿಗಳ ಪುನರುಜ್ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ ಮತ್ತು ನಮ್ಮ ನದಿಗಳನ್ನು ಸಂರಕ್ಷಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿವೆ. ಉಡುಪಿ ಜಿಲ್ಲೆಯಲ್ಲಿ ವಿವಿಧ ಋತುಗಳಲ್ಲಿ ನೀರಿನ ಲಭ್ಯತೆಯಲ್ಲಾಗುವ ವ್ಯತ್ಯಾಸವನ್ನು ಒತ್ತಿ ಹೇಳಿದ ಡಾ. ಕಿಣಿ ಆವರು ಸಾಮಾಜಿಕ ಜಾಗೃತಿಯ ಆವಶ್ಯಕತೆ ಮತ್ತು ನೀರಿನ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ವೈಯಕ್ತಿಕ ಹೊಣೆಗಾರಿಕೆಯ ಕುರಿತು ಒತ್ತಿ ಹೇಳಿದರು.
ಮಾಹೆ ಮಣಿಪಾಲದ ಸಹ ಕುಲಪತಿ ಡಾ. ನಾರಾಯಣ ಸಭಾಹಿತ್ ಅವರು ಮಾತನಾಡಿ ಜೀವನಾವಶ್ಯಕವಾದ ನೀರಿನ ಸಂಪನ್ಮೂಲಗಳನ್ನು ನಿಭಾಯಿಸುವಲ್ಲಿ ಜನಸಂಖ್ಯೆಯ ಹೆಚ್ಚಳದಿಂದಾಗುವ ಸವಾಲುಗಳ ಬಗ್ಗೆ ಅರಿವು ಮೂಡಿಸಿದರು. ಭೂ-ರಾಜಕೀಯ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ಪಿ. ವಿಜಯಲಕ್ಷ್ಮೀ ಅವರು ಗಂಗಾ ನದಿಯ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಮಹತ್ವ್ದದ ಕುರಿತು ಮಾತನಾಡಿದರು. ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದ ನೀರಿನ ಸಂಪನ್ಮೂಲಗಳ ಸುತ್ತ ಇರುವ ಭೌಗೋಳಿಕ-ರಾಜಕೀಯ ಸಂಪನ್ಮೂಲಗಳ ಕುರಿತು ಪ್ರಸ್ತಾವಿಸಿದರು. ಮಣಿಪಾಲ್ ಕ್ಯಾಂಪಸ್‌ನ ಸಹ ಕುಲಪತಿ ಡಾ. ಎನ್ ಎನ್. ಶರ್ಮಾ ಅವರು ಗಿಡಗಳಿಗೆ ಪವಿತ್ರ ಗಂಗಾ ಮತ್ತು ಸ್ವರ್ಣಾ ನದಿಗಳ ನೀರನ್ನು ಉಣಿಸಿದರು ಮತ್ತು ಆ ಗಿಡಗಳನ್ನು ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡಲಾಯಿತು. ‘ಶುದ್ಧ ಗಂಗಾ’ [ಕ್ಲೀನ್ ಗಂಗಾ] ರಾಷ್ಟ್ರೀಯ ಆಂದೋಲನದ ಭಾಗವಹಿಸುವಿಕೆಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವ ಭಾರತದ ಐವತ್ತು ವಿಶ್ವವಿದ್ಯಾನಿಲಯಗಳಲ್ಲಿ ಮಾಹೆಯೂ ಒಂದು ಎಂದು ಡಾ. ಶರ್ಮಾ ಹೇಳಿದರು.
ತನ್ವಿ ಅಮೀನ್ ಅವರ ಭಕ್ತಿಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕಾನಿತ್ ಸಾವ್ಕರ್ ಅವರು ನಿರ್ವಹಿಸಿದರು . ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕರಾದ ಡಾ. ಗೀತಾ ಮಯ್ಯ ಧನ್ಯವಾದ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಗಂಗಾ ಯುವ ಸಂಸತ್, ‘ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ವೈರುಧ್ಯ : ನದಿಯ ಪುನರುಜ್ಜೀವನದ ಸಮತೋಲನದ ಮೇಲಿನ ಆಘಾತ’ ಎಂಬ ವಿಷಯದ ಮೇಲೆ ಚರ್ಚಾಗೋಷ್ಠಿಯನ್ನು ಆಯೋಜಿಸಿತ್ತು. ಮಾಹೆಯ ಭೂ-ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ವಿದ್ಯಾರ್ಥಿಗಳು ಸರಕಾರಿ ಅಧಿಕಾರಿಗಳ, ವಿರೋಧ ಪಕ್ಷದ ನಾಯಕರ, ಪ್ರಭುತ್ವದ ಪ್ರತಿನಿಧಿಗಳ ಪಾತ್ರವಹಿಸಿ ತಮ್ಮವಾಕ್ ಪ್ರತಿಭೆಯನ್ನು ಪ್ರದರ್ಶಿಸಿದರು. ನವೀನ ಮತ್ತು ಪ್ರಾಯೋಗಿಕ ಸಲಹೆಗಳನ್ನು ಮುಂದಿಟ್ಟು ಆರ್ಥಿಕ ಅಭಿವೃದ್ಧಿಯ ಜೊತೆಗೆ ನದಿಯ ಸಂರಕ್ಷಣೆಯನ್ನು ಸೌಹಾರ್ದಯುತವಾಗಿಸುವ ಬಗ್ಗೆ ಮಾತನಾಡಿದರು.
ಮಾಹೆಯಲ್ಲಿ ಗಂಗಾ ಚಟುವಟಿಕೆಗಳ ಸಂಘ [ಗಂಗಾ ಆ್ಯಕ್ಟಿವಿಟಿ ಕ್ಲಬ್] ಮತ್ತು ಗಂಗಾ ಯುವ ಸಂಸತ್ [ಗಂಗಾ ಯೂತ್ ಪಾರ್ಲಿಮೆಂಟ್] ಸ್ಥಾಪನೆಯು ಶ್ಲಾಘನೀಯವಾದ ಹೆಜ್ಜೆಯಾಗಿದೆ. ಇದು ಸುಸ್ಥಿರ ಅಭಿವೃದ್ಧಿಯ ಕಾರ್ಯಕ್ರಮಗಳ ಅಗತ್ಯತೆಯ ಕುರಿತು ಗಮನಹರಿಸುತ್ತದೆ ಮತ್ತು ನಮ್ಮ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲಿದೆ .